ಹಳಿಯಾಳ ವಿಧಾನಸಭಾ ಕ್ಷೇತ್ರದಾದ್ಯಂತ ನಡೆಯುತ್ತಿರುವ ಸ್ವಚ್ಛತಾ ಸಪ್ತಾಹ ಅಭಿಯಾನದ ಅಂಗವಾಗಿ ಇಂದು ದಾಂಡೇಲಿ ನಗರಸಭೆ ವ್ಯಾಪ್ತಿಯ ಹಾಳಮಡ್ಡಿ ಹಾಗೂ ಪ್ರಮುಖ ಬೀದಿಗಳಲ್ಲಿ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಲಾಯಿತು.
ಸ್ವಚ್ಛತೆ ಕೇವಲ ಪರಿಸರದ ಸೌಂದರ್ಯವನ್ನು ಹೆಚ್ಚಿಸುವ ಕಾರ್ಯವಲ್ಲ ಅದು ಆರೋಗ್ಯಕರ, ಸುಂದರ ಹಾಗೂ ಸ್ವಸ್ಥ ಸಮಾಜ ನಿರ್ಮಾಣದ ಬುನಾದಿಯಾಗಿದೆ. ಸ್ವಚ್ಛತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಜೊತೆಗೆ ಸ್ವಚ್ಛ ಪರಿಸರ ನಿರ್ಮಾಣದ ಹೊಣೆಗಾರಿಕೆಯನ್ನು ಎಲ್ಲರೂ ಹಂಚಿಕೊಳ್ಳುವ ಸಂಕಲ್ಪದೊಂದಿಗೆ ಈ ಅಭಿಯಾನವನ್ನು ಮುಂದುವರಿಸಲಾಗುತ್ತಿದೆ. ಈ ಸ್ವಚ್ಛತಾ ಕಾರ್ಯದಲ್ಲಿ ಸ್ಥಳೀಯ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಕೈಜೋಡಿಸಿದರು.
ಸಶಸ್ತ್ರ ಕ್ರಾಂತಿಯ ಮೂಲಕ 'ಸಮಾಜವಾದಿ ರಾಷ್ಟ್ರ ನಿರ್ಮಾಣದ ಕನಸು ಕಂಡ ಸ್ಪೂರ್ತಿಯ ಚಿಲುಮೆಯಾಗಿದ್ದ ಶ್ರೀ ಭಗತ್ ಸಿಂಗ್ ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳು.
ಬ್ರಿಟಿಷರ ದುರಾಡಳಿತ ಹಾಗೂ ದಬ್ಬಾಳಿಕೆಯನ್ನು ಕೊನೆಗಾಣಿಸಲು ಹೆದರದೆ ಹೋರಾಡಿ ದೇಶಕ್ಕಾಗಿ ಜೀವಬಿಟ್ಟ ಅವರ ಬಲಿದಾನವು ಭಾರತದ ಇತಿಹಾಸದಲ್ಲಿ ಚಿರಸ್ಥಾಯಿಯಾಗಿದೆ.
#BhagatSingh
ಹಲವಾರು ಭಾಷೆಗಳಲ್ಲಿ ತಮ್ಮ ಗಾನಸುಧೆ ಹರಿಸುವ ಮೂಲಕ ದೇಶದ ಕೋಟ್ಯಂತರ ಜನರ ಮನದಲ್ಲಿ ಶಾಶ್ವತವಾಗಿ ನೆಲೆಯಾಗಿರುವ, 'ಕ್ವೀನ್ ಆಫ್ ಮೆಲೋಡಿ' ಎಂದೇ ವಿಶ್ವವಿಖ್ಯಾತಿ ಪಡೆದಿದ್ದ ಭಾರತ ರತ್ನ ಲತಾ ಮಂಗೇಶ್ಕರ್ ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳು.
#LataMangeshkar
‘ವಿಶ್ವ ಪ್ರವಾಸೋದ್ಯಮ ದಿನ’
"ದೇಶ ಸುತ್ತು ಕೋಶ ಓದು" ಎಂಬ ನುಡಿ ಮಾತಿನಂತೆ ಹೆಚ್ಚೆಚ್ಚು ಪ್ರವಾಸ ಮಾಡುವ ಮೂಲಕ ನಮ್ಮ ಜ್ಞಾನ ಭಂಡಾರವನ್ನು ಹೆಚ್ಚಿಸಿಕೊಳ್ಳೋಣ ಅದರ ಜೊತೆಗೆ ಪ್ರವಾಸೋದ್ಯಮ ತಾಣಗಳ ಸ್ವಚ್ಛತೆಯ ಅಭಿವೃದ್ಧಿಗೆ ನಾವೆಲ್ಲರೂ ಸಹಕರಿಸೋಣ.
#WorldTourismDay
ಹಳಿಯಾಳ ವಿಧಾನಸಭಾ ಕ್ಷೇತ್ರದಾದ್ಯಂತ ನಡೆಯುತ್ತಿರುವ ಸ್ವಚ್ಛತಾ ಸಪ್ತಾಹ ಅಭಿಯಾನದ ಭಾಗವಾಗಿ ಇಂದು ಬಿ.ಕೆ.ಹಳ್ಳಿ ಹಾಗೂ ಹಳಿಯಾಳ ಪಟ್ಟಣದ ಕಿಲ್ಲಾ ಪ್ರದೇಶದ ಪ್ರಮುಖ ಬೀದಿಗಳಲ್ಲಿ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಲಾಯಿತು.
ಸ್ವಚ್ಛತೆ ನಮ್ಮ ಪರಿಸರದ ಸೌಂದರ್ಯವನ್ನು ಹೆಚ್ಚಿಸುವುದರ ಜೊತೆಗೆ ಆರೋಗ್ಯಕರ ಸಮಾಜ ನಿರ್ಮಾಣದ ಅಡಿಪಾಯವಾಗಿದೆ. ಈ ಕಾರ್ಯದಲ್ಲಿ ಸ್ಥಳೀಯ ಮುಖಂಡರು, ಕಾರ್ಯಕರ್ತರು, ಗ್ರಾಮಸ್ಥರು ಹಾಗೂ ಸಾರ್ವಜನಿಕರು ಪಾಲ್ಗೊಂಡರು.
ಸತಿ ಸಹಗಮನ, ಬಾಲ್ಯವಿವಾಹ ಮತ್ತು ಬಹುಪತ್ನಿತ್ವದಂತಹ ಸಾಮಾಜಿಕ ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಡಿದ ಭಾರತದ ನವೋದಯ ಪಿತಾಮಹ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದ ಶ್ರೀ ರಾಜ ರಾಮ್ ಮೋಹನ್ ರಾಯ್ ಅವರ ಪುಣ್ಯಸ್ಮರಣೆಯಂದು ಗೌರವಪೂರ್ವಕ ನಮನಗಳು.
#RajaRamMohanRoy
ಮಣ್ಣಿನೊಂದಿಗೆ ಮಮತೆ ಬೆಳೆಸಿ,ಬೆವರ ಹನಿಗಳಿಂದ ಬದುಕಿನ ಭರವಸೆಯನ್ನು ಬಿತ್ತಿದ ಹಳಿಯಾಳ ತಾಲೂಕಿನ ಗುಂಡೊಳ್ಳಿ ಗ್ರಾಮದ ಪ್ರಗತಿಪರ ರೈತ ಶ್ರೀ ಮಂಜುನಾಥ್ ಕರ್ಲೆಕರ್ ಅವರು ಜಿಲ್ಲಾ ಮಟ್ಟದ ಶ್ರೇಷ್ಠ ರೈತ ಪ್ರಶಸ್ತಿಗೆ ಭಾಜನರಾಗಿರುವುದು ಹೆಮ್ಮೆಯ ಸಂಗತಿಯಾಗಿದ್ದು ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
ಕೃಷಿಯಲ್ಲಿ ಹೊಸತನವನ್ನು ಅಳವಡಿಸಿಕೊಂಡು, ಆಧುನಿಕ ಕೃಷಿ ಪದ್ಧತಿಗಳ ಕುರಿತು ಜ್ಞಾನವನ್ನು ಪಡೆದು,ತಮ್ಮ ಅನುಭವ ಹಾಗೂ ಪರಿಶ್ರಮವನ್ನು ಸಮರ್ಥವಾಗಿ ಬಳಸಿಕೊಂಡು ಕೃಷಿ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿರುವುದು ಅಭಿನಂದನಾರ್ಹ.ವಿಶೇಷವಾಗಿ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿಯಲ್ಲಿ ತರಬೇತಿ ಪಡೆದು,ಕೌಶಲ್ಯ ಮತ್ತು ಮಾರ್ಗದರ್ಶನವನ್ನು ಕೃಷಿ ಬದುಕಿನಲ್ಲಿ ಅಳವಡಿಸಿಕೊಂಡು ಸ್ವಾವಲಂಬನೆಯತ್ತ ಹೆಜ್ಜೆಯಿಟ್ಟಿರುವುದು ಅವರ ಸಾಧನೆಗೆ ಮತ್ತಷ್ಟು ಅರ್ಥ ತುಂಬಿದೆ.
ಶ್ರೀ ಮಂಜುನಾಥ್ ಕರ್ಲೆಕರ್ ಅವರ ಈ ಸಾಧನೆ ನಮ್ಮ ತಾಲೂಕಿನ ರೈತ ಸಮುದಾಯಕ್ಕೆ ಸ್ಫೂರ್ತಿಯಾಗಲಿ.ಹಾಗೂ ಅವರ ಕೃಷಿ ಬದುಕು ಮತ್ತಷ್ಟು ಸಮೃದ್ಧಿಯಾಗಿ, ಇನ್ನಷ್ಟು ಯಶಸ್ಸಿನ ಮೈಲುಗಲ್ಲುಗಳನ್ನು ಬೆಳೆಯಲಿ ಎಂದು ಹಾರೈಸುತ್ತೇನೆ.
ಸ್ವಚ್ಛತಾ ಸಪ್ತಾಹದ ಅಂಗವಾಗಿ ಹಳಿಯಾಳ ವಿಧಾನಸಭಾ ಕ್ಷೇತ್ರದಾದ್ಯಂತ ಹಮ್ಮಿಕೊಂಡ ಸ್ವಚ್ಛತಾ ಕಾರ್ಯದಲ್ಲಿ ಉದ್ಯೋಗ ವಿದ್ಯಾನಗರ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಸ್ವಚ್ಛತೆಯನ್ನು ಕೈಗೊಳ್ಳಲಾಯಿತು. ಸ್ವಚ್ಛತೆ ನಮ್ಮ ಸುತ್ತಮುತ್ತಲಿನ ಪರಿಸರವನ್ನು ನಿರ್ಮಲವಾಗಿಸುವುದಷ್ಟೇ ಅಲ್ಲ,ಆರೋಗ್ಯಕರ ಹಾಗೂ ಸುಂದರ ಸಮಾಜ ನಿರ್ಮಾಣದ ಜವಾಬ್ದಾರಿಯನ್ನೂ ನೆನಪಿಸುವ ಕಾರ್ಯವಾಗಿದೆ.
ಈ ಸ್ವಚ್ಛತಾ ಅಭಿಯಾನದಲ್ಲಿ
ಟ್ರಸ್ಟ್ ನ ಆಡಳಿತಾಧಿಕಾರಿಗಳು,ಸಂಸ್ಥೆಯ ಪ್ರಾಚಾರ್ಯರು ಹಾಗೂ ಸಿಬ್ಬಂದಿ ವರ್ಗದವರು,ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿಯ ಶಿಬಿರಾರ್ಥಿಗಳು ಹಾಗೂ ವಿವಿಡಿ ಶಾಲೆಯ ಸಿಬ್ಬಂದಿಗಳು ಪಾಲ್ಗೊಂಡರು.
ಕೇಂದ್ರ ಹಣಕಾಸು ಸಚಿವರಾಗಿ, ಆರ್ಥಿಕ ಉದಾರೀಕರಣ ನೀತಿಗಳನ್ನು ಜಾರಿಗೆ ತಂದು ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತಂದ, ಮಾಜಿ ಪ್ರಧಾನಮಂತ್ರಿಗಳಾದ ಡಾ|| ಮನಮೋಹನ್ ಸಿಂಗ್ ಅವರ ಜನ್ಮದಿನದಂದು ಅನಂತ ನಮನಗಳು.
ದೇಶವನ್ನು ಪ್ರಗತಿಯ ಹೊಸ ಪಥಕ್ಕೆ ಮುನ್ನಡೆಸಿದ ಅವರ ಕೊಡುಗೆ ಸದಾ ಸ್ಮರಣೀಯ.
#ManMohanSingh
2026ರ ಐತಿಹಾಸಿಕ ಮೈಸೂರು ದಸರಾ ಮಹೋತ್ಸವವನ್ನು ಕೊಪ್ಪಳದ ಗವಿಮಠದ ಪರಮಪೂಜ್ಯ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿಗಳು ಉದ್ಘಾಟಿಸುತ್ತಿರುವುದು ಸಮಸ್ತ ಕರುನಾಡಿಗೆ ಅತ್ಯಂತ ಹೆಮ್ಮೆಯ ಹಾಗೂ ಹರ್ಷದ ವಿಷಯ. ಸಂತರು ಮತ್ತು ಸಂಸ್ಕೃತಿಯ ಈ ಅಪೂರ್ವ ಮಿಲನ ನಮ್ಮ ನಾಡಿನ ಪರಂಪರೆಯನ್ನು ಮತ್ತಷ್ಟು ಬೆಳಗಲಿದೆ. ಈ ಹಬ್ಬದ ಸಂಭ್ರಮವು ಎಲ್ಲರ ಜೀವನದಲ್ಲಿ ಹೊಸ ಉತ್ಸಾಹ ಹಾಗೂ ಸಡಗರವನ್ನು ತರಲಿ ಎಂದು ಆಶಿಸುತ್ತೇನೆ.
#MysoreDasara2026
ಖ್ಯಾತ ಹಿನ್ನೆಲೆ ಗಾಯಕರು, ಅಸಂಖ್ಯಾತ ಗೀತೆಗಳಿಗೆ ಮಾಧುರ್ಯ ತುಂಬಿದ ಗಾನಗಂಧರ್ವ, ಸಂಗೀತ ಸಂಯೋಜನೆಯಲ್ಲೂ ಸೈ ಎನಿಸಿಕೊಂಡಿದ್ದ ಸ್ವರ ಮಾಂತ್ರಿಕರಾದ ಶ್ರೀ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು.
#SPBalasubrahmanyam
ನಾಡಿನ ಸಮಸ್ತ ಜನತೆಗೆ ಅನಂತ ಚತುರ್ದಶಿ ದಿನದ ಶುಭಾಶಯಗಳು!
ಈ ಶುಭ ದಿನದಂದು ನಿಮ್ಮೆಲ್ಲ ಸಕಲ ವಿಘ್ನಗಳನ್ನು ನಿವಾರಿಸುವ ನಮ್ಮ ಮುದ್ದಿನ ಬಪ್ಪನು ನಿಮಗೆ ಅಪಾರ ಶಕ್ತಿ, ಧೈರ್ಯ ಮತ್ತು ಯಶಸ್ಸನ್ನು ಕರುಣಿಸಲಿ ಎಂದು ಭಕ್ತಿಯಿಂದ ಪ್ರಾರ್ಥಿಸುತ್ತೇನೆ.
#AnanthaChaturdashi
ಕರ್ನಾಟಕದ ಹಿರಿಯ ಮನೋವೈದ್ಯರು, ಪ್ರೇರಣಾದಾಯಿ ವಾಗ್ಮಿಗಳು,ಅಂಕಣಕಾರರು ಹಾಗೂ ಆತ್ಮೀಯರಾದ ಧಾರವಾಡದ ಡಾ. ಆನಂದ ಪಾಂಡುರಂಗಿ ಅವರ ನಿಧನದ ಸುದ್ದಿ ತಿಳಿದು ಮನಸ್ಸಿಗೆ ತೀವ್ರ ದುಃಖವಾಯಿತು.
ದಶಕಗಳ ಕಾಲ ವೈದ್ಯಕೀಯ ಸೇವೆಯ ಮೂಲಕ ಅಸಂಖ್ಯಾತ ಜೀವಗಳಿಗೆ ಸಾಂತ್ವನ ಹಾಗೂ ಚಿಕಿತ್ಸೆಯ ಬೆಳಕು ನೀಡಿದ ಅವರು, ಮಾನಸಿಕ ಆರೋಗ್ಯದ ಮಹತ್ವವನ್ನು ಸಮಾಜಕ್ಕೆ ಮನವರಿಕೆ ಮಾಡಿಕೊಡುವಲ್ಲಿ ಅಪೂರ್ವ ಸೇವೆ ಸಲ್ಲಿಸಿದ್ದರು.ವಿಶೇಷವಾಗಿ ಯುವಜನರು ಹಾಗೂ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ,ಸಕಾರಾತ್ಮಕ ಚಿಂತನೆ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಪ್ರೇರಣೆ ನೀಡಿದ ಅವರ ಉಪನ್ಯಾಸಗಳು, ಅಂಕಣಗಳು ಹಾಗೂ ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳು ಅಚ್ಚಳಿಯದ ಪ್ರಭಾವ ಬೀರಿವೆ.
ವೈದ್ಯರಾಗಿ ರೋಗಿಗಳ ನೋವಿಗೆ ಸ್ಪಂದಿಸಿದ ಅವರು ವಾಗ್ಮಿಯಾಗಿ ಮನಸ್ಸುಗಳನ್ನು ಮುಟ್ಟಿದರು, ಅಂಕಣಕಾರರಾಗಿ ಸಮಾಜಕ್ಕೆ ಚಿಂತನೆಯ ದಾರಿಯನ್ನು ತೋರಿದರು. ತಮ್ಮ ಜ್ಞಾನ,ಅನುಭವ ಮತ್ತು ಮಾನವೀಯತೆಯ ಮೂಲಕ ಸಮಾಜಕ್ಕೆ ನೀಡಿದ ಅವರ ಕೊಡುಗೆ ಸದಾ ಸ್ಮರಣೀಯ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಭಾರತೀಯ ವೈದ್ಯಕೀಯ ಕ್ಷೇತ್ರದ ಪ್ರತಿಷ್ಠಿತ ಡಾ. ಬಿ.ಸಿ.ರಾಯ್ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳಿಗೆ ಪಾತ್ರರಾಗಿದ್ದ ಅವರ ಅಗಲಿಕೆ ವೈದ್ಯಕೀಯ ಕ್ಷೇತ್ರಕ್ಕಷ್ಟೇ ಅಲ್ಲದೆ, ಮಾನಸಿಕ ಆರೋಗ್ಯ ಜಾಗೃತಿ ಹಾಗೂ ಸಾಮಾಜಿಕ ಚಿಂತನೆಯ ಲೋಕಕ್ಕೂ ತುಂಬಲಾರದ ನಷ್ಟವಾಗಿದೆ.
ಭಗವಂತನು ಅಗಲಿದ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ.ಅವರ ಕುಟುಂಬವರ್ಗ ಹಾಗೂ ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ.
ರಾಜ್ಯದಲ್ಲಿ ಮುಂಗಾರು ಮಳೆಯ ಕೊರತೆಯಿಂದ ಉಂಟಾಗಿರುವ ಬರ ಪರಿಸ್ಥಿತಿಯಿಂದ ಹಳಿಯಾಳ ತಾಲೂಕಿನ ರೈತರು ಎದುರಿಸುತ್ತಿರುವ ಸಂಕಷ್ಟವನ್ನು ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರ ಗಮನಕ್ಕೆ ತಂದು ಮನವಿ ಸಲ್ಲಿಸಿದ್ದೆನು.
ಮುಂಗಾರು ಮಳೆಯ ಅಭಾವದಿಂದ ಉಂಟಾಗಿರುವ ಬರ ಪರಿಸ್ಥಿತಿಯನ್ನು ಸರ್ಕಾರವು ನಿರಂತರವಾಗಿ ವೈಜ್ಞಾನಿಕವಾಗಿ ಮೌಲ್ಯಮಾಪನ ನಡೆಸಲಾಗುತ್ತಿದ್ದು,ರೈತರ ಸಂಕಷ್ಟಕ್ಕೆ ತ್ವರಿತವಾಗಿ ಸ್ಪಂದಿಸುವ ನಿಟ್ಟಿನಲ್ಲಿ ಹಂತ ಹಂತವಾಗಿ ಕ್ರಮ ಕೈಗೊಳ್ಳುತ್ತಿದೆ.ಇದರ ಜೊತೆಗೆ ಮಳೆ ಪ್ರಮಾಣ, ಮಣ್ಣಿನ ತೇವಾಂಶ,ಬೆಳೆ ಸ್ಥಿತಿ ಸೇರಿದಂತೆ ವಿವಿಧ ವೈಜ್ಞಾನಿಕ ಮಾನದಂಡಗಳ ಆಧಾರದ ಮೇಲೆ 5ನೇ ಹಂತದಲ್ಲಿ 10 ಜಿಲ್ಲೆಗಳ 29 ತಾಲೂಕುಗಳ ಪೈಕಿ ನನ್ನ ಮತಕ್ಷೇತ್ರದ ಹಳಿಯಾಳ ತಾಲೂಕು Ground Truthing ಗೆ ಅರ್ಹತೆ ಪಡೆದಿದೆ. ವೈಜ್ಞಾನಿಕ ಪರಿಶೀಲನೆ, ಪಾರದರ್ಶಕ ಸಮೀಕ್ಷೆ ಮತ್ತು ನಿಖರ ವರದಿಯ ಆಧಾರದಲ್ಲಿ ಸರ್ಕಾರವು ಮುಂದಿನ ಕ್ರಮಗಳನ್ನು ಕೈಗೊಳ್ಳುವ ವಿಶ್ವಾಸವಿದೆ.
ಈ ವಿಚಾರವಾಗಿ ಬೆಳೆ ಹಾನಿಯ ನೈಜ ಚಿತ್ರಣ ಆಧರಿಸಿ,ಬರದಿಂದ ಸಂಕಷ್ಟಕ್ಕೆ ಸಿಲುಕಿರುವ ತಾಲೂಕಿನ ರೈತರಿಗೆ ನಿಯಮಾನುಸಾರ ಅಗತ್ಯ ನೆರವು ನೀಡಲು ಅನುಕೂಲವಾಗಲಿದ್ದು, ರೈತರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ಮಹತ್ವದ ನಿರ್ಧಾರ ಕೈಗೊಂಡಿರುವ ಮಾನ್ಯ ಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಹಾಗೂ ಕಂದಾಯ ಸಚಿವರು ಮತ್ತು ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ ಅವರಿಗೆ ಅಭಿನಂದನೆಗಳು.
ಕಲೆ, ಸಾಹಿತ್ಯಗಳ ಮಹಾಪೋಷಕರು, ಶ್ರೇಷ್ಠ ವಿದ್ವಾಂಸರು, ಹಾಗೂ ರಾಜ್ಯದ ಮೊದಲ ರಾಜ್ಯಪಾಲರಾಗಿ ಅನನ್ಯ ಸೇವೆ ಸಲ್ಲಿಸಿದ್ದ ರಾಜಯೋಗಿ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರ ಪುಣ್ಯಸ್ಮರಣೆಯಂದು ಗೌರವಪೂರ್ವಕ ನಮನಗಳು.
#JayachamarajendraWadiyar
ನಗರದ ನೈರ್ಮಲ್ಯ ಕಾಪಾಡಲು ಶ್ರಮಿಸುತ್ತಿರುವ ನಮ್ಮೆಲ್ಲ ಪೌರ ಕಾರ್ಮಿಕರಿಗೆ ‘ಪೌರ ಕಾರ್ಮಿಕರ ದಿನ’ದ ಶುಭಾಶಯಗಳು.
ನಗರದ ಸ್ವಚ್ಛತೆ, ಆರೋಗ್ಯ ಮತ್ತು ಸುವ್ಯವಸ್ಥೆಯ ಹಿತಕ್ಕಾಗಿ ಪ್ರತಿದಿನ ಬೆಳಗ್ಗೆಯೇ ಎದ್ದು, ಮಳೆ-ಚಳಿ-ಗಾಳಿ-ಧೂಳನ್ನು ಲೆಕ್ಕಿಸದೆ ಶ್ರಮಿಸುತ್ತಿರುವ ಪೌರ ಕಾರ್ಮಿಕರ ಸೇವೆ ಅಮೂಲ್ಯ. ಕೇವಲ ಕೃತಜ್ಞತೆ ಸಲ್ಲಿಸುವುದಷ್ಟೇ ಅಲ್ಲದೆ, ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯದೆ ಕಸ ವಿಂಗಡಣೆಯಲ್ಲಿ ಅವರಿಗೆ ಸಹಕರಿಸುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವ.
#ಪೌರಕಾರ್ಮಿಕರದಿನ
ಸಿದ್ದಿ ಹಾಗೂ ಹಸಲ ಸಮುದಾಯಗಳಿಗೆ ಅರಣ್ಯ ಇಲಾಖೆಯ ನೇಮಕಾತಿಯಲ್ಲಿ ವಿಶೇಷ ಪ್ರಾತಿನಿಧ್ಯ ಕಲ್ಪಿಸುವ ಮೂಲಕ ಪರಿಶಿಷ್ಟ ಪಂಗಡದ ಬುಡಕಟ್ಟು ಜನಾಂಗಗಳಿಗೆ ಸಾಮಾಜಿಕ ನ್ಯಾಯ ಹಾಗೂ ಸಮಾನ ಅವಕಾಶ ಒದಗಿಸಿರುವ ಸರ್ಕಾರದ ಈ ಮಹತ್ವದ ಕ್ರಮ ಅಭಿನಂದನಾರ್ಹ.
ವಿಶೇಷವಾಗಿ ಉತ್ತರ ಕನ್ನಡ ಜಿಲ್ಲೆಯ ಸಿದ್ದಿ ಹಾಗೂ ಹಸಲ ಸಮುದಾಯದ ಯುವಜನರಿಗೆ ಉದ್ಯೋಗಾವಕಾಶಗಳ ಹೊಸ ದಾರಿಯನ್ನು ತೆರೆಯಲಿರುವ ಈ ನಿರ್ಧಾರವು ಅವರ ಸಾಮಾಜಿಕ ಹಾಗೂ ಆರ್ಥಿಕ ಸಬಲೀಕರಣಕ್ಕೆ ಮಹತ್ವದ ಹೆಜ್ಜೆಯಾಗಲಿದೆ.ಅರಣ್ಯವನ್ನು ಕಾಪಾಡುತ್ತಾ, ಅರಣ್ಯದೊಂದಿಗೆ ಬದುಕು ಕಟ್ಟಿಕೊಂಡಿರುವ ನಮ್ಮ ಬುಡಕಟ್ಟು ಸಮುದಾಯಗಳ ಯುವಜನರಿಗೆ ಅವಕಾಶ ಕಲ್ಪಿಸುವ ಈ ಕ್ರಮವು ಸಮಾನತೆ, ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣದ ಆಶಯಕ್ಕೆ ಮತ್ತಷ್ಟು ಬಲ ತುಂಬಲಿದೆ.
ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಕರಡು ಅಧಿಸೂಚನೆ ಹಾಗೂ ಕಸ್ತೂರಿ ರಂಗನ್ ವರದಿಯ ಸಾಧಕ ಬಾಧಕಗಳನ್ನು ಸಮಗ್ರವಾಗಿ ಪರಿಶೀಲಿಸಿ, ಕರಡು ಅಧಿಸೂಚನೆಯನ್ನು ಹಿಂಪಡೆಯುವಂತೆ ದಿನಾಂಕ 14-08-2026ರಂದು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವರಾದ ಶ್ರೀ ಭೂಪೇಂದ್ರ ಯಾದವ್ ಅವರಿಗೆ ಪತ್ರದ ಮೂಲಕ ಮನವಿ ಸಲ್ಲಿಸಿದ್ದೆನು. ಮಾನ್ಯ ಸಚಿವರು ಈ ಕುರಿತು ವಾಸ್ತವಾಂಶ ಮತ್ತು ಸಮರ್ಥನೀಯತೆಯ ಆಧಾರದ ಮೇಲೆ ಪರಿಶೀಲಿಸಲು ಸಮಿತಿಯೊಂದನ್ನು ರಚಿಸಲಾಗಿದೆ ಎಂದು ಪತ್ರದ ಮೂಲಕ ತಿಳಿಸಿದ್ದಾರೆ .
ಹಳಿಯಾಳ ತಾಲೂಕಿನ ಮಂಗಳವಾಡ ಗ್ರಾಮದ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ಮಂಗೇಶ್ ಕೃಷ್ಣ ಪಾಟೀಲ ಅವರ ಶತಮಾನೋತ್ಸವದ ಸಂಭ್ರಮದಲ್ಲಿ,ಅವರ ಶತಾಯುಷ್ಯದ ಜೀವನಯಾನ ಹಾಗೂ ದೇಶಸೇವೆಯ ಅಮೂಲ್ಯ ಕೊಡುಗೆಯನ್ನು ಗೌರವಪೂರ್ವಕವಾಗಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಅವರನ್ನು ಸನ್ಮಾನಿಸಿ, ಶತಮಾನೋತ್ಸವದ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಲಾಯಿತು.
ಸ್ವಾತಂತ್ರ್ಯ ಹೋರಾಟದ ಆದರ್ಶಗಳನ್ನು ಬದುಕಿನುದ್ದಕ್ಕೂ ಅಳವಡಿಸಿಕೊಂಡು, ಸಮಾಜಕ್ಕೆ ಪ್ರೇರಣೆಯಾಗಿರುವ ಅವರ ಶತಮಾನೋತ್ಸವವು ನಾಡಿನ ಹೆಮ್ಮೆಯ ಕ್ಷಣವಾಗಿದೆ.ಭಗವಂತನು ಅವರಿಗೆ ಉತ್ತಮ ಆರೋಗ್ಯ, ನೆಮ್ಮದಿ ಹಾಗೂ ದೀರ್ಘಾಯುಷ್ಯವನ್ನು ಕರುಣಿಸಲಿ ಎಂದು ಹಾರೈಸುತ್ತೇನೆ.