ಕನ್ನಡ ಅಂಕಿ - ಇಂಗ್ಲೀಷ್ ಅಂಕಿ ? ರೋಹಿತ್ ಚಕ್ರತೀರ್ಥ ಅವರ ಬರಹದ ಒಂದು ಭಾಗ - ಆಸಕ್ತರಿಗೆಂದು ಇಲ್ಲಿ ಕತ್ತರಿಸಿ ಅಂಟಿಸಿದ್ದೇನೆ.
"ಕೆಲ ವರ್ಷಗಳ ಹಿಂದೆ ನಾನು ಸದಸ್ಯನಾಗಿದ್ದ ಒಂದು ಸರಕಾರೀ ಸಂಸ್ಥೆಯಲ್ಲಿ ರಾಜ್ಯೋತ್ಸವದ ಸಮಯದಲ್ಲಿ 'ಕನ್ನಡ ಅಂಕಿಗಳಿರುವ ಗಡಿಯಾರ'ಗಳನ್ನು ಮಾಡಬೇಕೆಂಬ ಯೋಜನೆ ಹಾಕಲಾಯಿತು. ಆಗ ಆ ಸಂಸ್ಥೆಯ ಅಧ್ಯಕ್ಷರು 'ನಾವು ಇನ್ನೂ ಇಂಗ್ಲೀಷ್ ಅಂಕೆಗಳನ್ನು ಬಳಸಬೇಕೆ? ಕನ್ನಡ ಅಂಕೆಗಳನ್ನು ಬಳಸೋಣ' ಎಂದರು. ಅದಕ್ಕೆ ನಾನು ಸೌಮ್ಯವಾಗಿ ಆಕ್ಷೇಪಿಸಿದೆ. 'ಮಾನ್ಯರೆ, ಕನ್ನಡ ಅಂಕೆಗಳನ್ನು ಬಳಸಬೇಕೆಂಬ ನಿಮ್ಮ ಆಶಯಕ್ಕೆ ನನ್ನ ಬೆಂಬಲ ಇದೆ. ಆದರೆ ಅದಕ್ಕಾಗಿ ನೀವು ಹೇಳುವ 'ಇಂಗ್ಲೀಷ್ ಅಂಕೆ'ಗಳನ್ನು ತುಚ್ಛೀಕರಿಸಬೇಕಾಗಿಲ್ಲ. ಯಾಕೆಂದರೆ ಅವು ಮೂಲತಃ ಇಂಗ್ಲೀಷ್ ಅಂಕೆಗಳಲ್ಲ. ಅವನ್ನು ಸೃಷ್ಟಿಸಿದವರು ಭಾರತೀಯರೇ. ನಾವು ಎಲ್ಲೆಲ್ಲೂ ಬಳಸುವ 1, 2, 3, ಇತ್ಯಾದಿ ಎಲ್ಲ ಅಂಕೆಗಳೂ - 0 ಯನ್ನೂ ಒಳಗೊಂಡು - ಎಲ್ಲವೂ ಶುದ್ಧ ಭಾರತೀಯ. ಅವನ್ನು ಸೃಷ್ಟಿಸಿದವರು ನಮ್ಮವರೇ. ಇಂಗ್ಲೀಷಿನವರದ್ದು ಎಂಬ ಅಂಕೆಗಳು ಯಾವುದೂ ಇಲ್ಲ. ರೋಮನ್ ಲಿಪಿಯಲ್ಲಿ ಅಕ್ಷರಗಳಿಗೂ ಸಂಖ್ಯೆಗಳಿಗೂ ಒಂದೇ ರೀತಿಯ ಸಂಕೇತಗಳನ್ನು ಬಳಸಿ ಅವರು ಸಿಕ್ಕಾಪಟ್ಟೆ ಗೊಂದಲ ಮಾಡಿಕೊಂಡರು (V ಎಂಬ ಸಂಕೇತ - ಅಕ್ಷರವೂ ಆಗಬಹುದು, 5 ಎಂಬ ಸಂಖ್ಯಾವಾಚಕವೂ ಆಗಬಹುದು). ಆದರೆ ಕನ್ನಡದವರು ಬುದ್ಧಿವಂತರು. ನಮ್ಮವರು ಅಕ್ಷರಗಳನ್ನಲ್ಲ - ಅವುಗಳ ಒತ್ತಕ್ಷರಗಳನ್ನು ಸಂಖ್ಯಾ ಸಂಕೇತಗಳಾಗಿ ಬಳಸಿಕೊಂಡು (ರೋಮನ್ನರಿಗೆ ಹುಟ್ಟಿದ್ದ) ಗೊಂದಲ ಇಲ್ಲದೆ ಕೆಲಸವನ್ನು ಸುಲಭ ಮಾಡಿಕೊಂಡರು. ಒಟ್ಟಿನಲ್ಲಿ 1, 2, 3, 4 ಇತ್ಯಾದಿಯೂ ನಮ್ಮವೇ; ೧, ೨, ೩, ೪ ಇತ್ಯಾದಿಯೂ ನಮ್ಮವೇ' ಎಂದೆ. "