ಸಾರ್ವಜನಿಕ ಜೀವನದಲ್ಲಿ ಅಪರೂಪದ ವ್ಯಕ್ತಿತ್ವಗಳನ್ನು ಗಳಿಸುವುದು ದೊಡ್ಡ ಭಾಗ್ಯ. ಅದಕ್ಕಿಂತ ದೊಡ್ಡ ಭಾಗ್ಯವೆಂದರೆ, ಕಾಲದ ಓಟದಲ್ಲೂ ಮಾಸದ, ಹುಸಿಯಾಗದ ಆತ್ಮೀಯ ಒಡನಾಟವನ್ನು ಕಾಯ್ದುಕೊಳ್ಳುವುದು.
ಕರ್ನಾಟಕ ವಿಧಾನ ಪರಿಷತ್ ಸಭಾಪತಿಗಳಾದ ಶ್ರೀ ಬಸವರಾಜ ಹೊರಟ್ಟಿ ಅವರೊಂದಿಗಿನ ನನ್ನ ಸ್ನೇಹ, ಸಂಪರ್ಕ ಮತ್ತು ಒಡನಾಟಕ್ಕೆ ಈಗ ಮೂರು ದಶಕಗಳ ಸುದೀರ್ಘ ಇತಿಹಾಸವಿದೆ. ಇದು ಕೇವಲ ಪರಿಚಯವಲ್ಲ. ಸುದೀರ್ಘ ವರ್ಷಗಳ ಸ್ನೇಹ, ಸಲುಗೆ ಮತ್ತು ಅಪರೂಪದ ಹಂಚಿಕೆಯ ಪಯಣ.
ನಾವಿಬ್ಬರೂ ಒಟ್ಟಿಗೆ ಮೂರ್ನಾಲ್ಕು ದೇಶಗಳಿಗೆ ಪ್ರವಾಸ ಕೈಗೊಂಡಿದ್ದೇವೆ. ದೇಶ-ವಿದೇಶಗಳ ಪ್ರವಾಸದಲ್ಲಿ ಜತೆಯಾಗಿ ಹೆಜ್ಜೆ ಹಾಕಿದಾಗ ವ್ಯಕ್ತಿಯ ನೈಜ ಸ್ವಭಾವ, ಸರಳತೆ ಮತ್ತು ಹಾಸ್ಯಪ್ರಜ್ಞೆ ಅನಾವರಣಗೊಳ್ಳುತ್ತದೆ. ಹೊರಟ್ಟಿಯವರ ಜತೆಗಿನ ಪ್ರಯಾಣವೆಂದರೆ ಅಲ್ಲಿ ಕಪಟವಿಲ್ಲದ ನಗು ಮತ್ತು ಮುಕ್ತ ಸಂಭಾಷಣೆಗಳಿಗೆ ಕೊರತೆಯೇ ಇರುವುದಿಲ್ಲ.
ಅಷ್ಟೇ ಅಲ್ಲ, ಕರ್ನಾಟಕದ ಉದ್ದಗಲಕ್ಕೂ ನೂರಾರು ವೇದಿಕೆಗಳನ್ನು ನಾವಿಬ್ಬರೂ ಹಂಚಿಕೊಂಡಿದ್ದೇವೆ. ಪ್ರತಿಯೊಂದು ಕಾರ್ಯಕ್ರಮದಲ್ಲೂ ಅವರ ಪ್ರಬುದ್ಧ ಮಾತುಗಳು ಹಾಗೂ ನೇರ ನುಡಿ ಜನಮನ ಗೆಲ್ಲುವುದನ್ನು ನಾನು ಹತ್ತಿರದಿಂದ ಕಂಡಿದ್ದೇನೆ.
ನಮ್ಮ ಆತ್ಮೀಯತೆಗೆ ಮತ್ತೊಂದು ಅಪರೂಪದ ಮೆರುಗು ಎಂದರೆ ಪ್ರತಿ ಭಾನುವಾರ ಅವರೊಂದಿಗೆ ಫೋನ್ ಸಂಭಾಷಣೆ! ಪ್ರತಿ ಭಾನುವಾರ ಬೆಳಗ್ಗೆ ನನಗೆ ತಪ್ಪದೇ ಹೊರಟ್ಟಿಯವರಿಂದ ಫೋನ್ ಬರುತ್ತದೆ. ಕನಿಷ್ಠ ಅರ್ಧ ಗಂಟೆ ನಾವಿಬ್ಬರೂ ಹರಟುತ್ತೇವೆ, ವಿಚಾರಗಳನ್ನು ವಿನಿಮಯ ಮಾಡಿಕೊಳ್ಳುತ್ತೇವೆ.
ನಮ್ಮ ಪತ್ರಿಕೆಯನ್ನು ಅತ್ಯಂತ ಆಸ್ಥೆಯಿಂದ, ಪ್ರೀತಿಯಿಂದ ಓದುವ ಹೊರಟ್ಟಿಯವರು, ತಾವು ಓದಿದ ಲೇಖನಗಳು, ಅಂಕಣಗಳು, ವರದಿಗಳು ಮತ್ತು ವಿಶ್ಲೇಷಣೆಗಳ ಬಗ್ಗೆ ಅತ್ಯಂತ ವಿಮರ್ಶಾತ್ಮಕವಾಗಿ, ನಿಷ್ಪಕ್ಷಪಾತವಾಗಿ ಮಾತನಾಡುತ್ತಾರೆ. ತೀರಾ ಇಷ್ಟವಾದರೆ, ತಮ್ಮ ಅಧಿಕೃತ ಲೆಟರ್ ಹೆಡ್ ನಲ್ಲಿ ಪ್ರಶಂಸೆಯನ್ನು ಬರೆದು ಕಳಿಸಿ ಅದನ್ನು ದಾಖಲಿಸುತ್ತಾರೆ.
ಸಾರ್ವಜನಿಕ ಜೀವನದಲ್ಲಿ ದಾಖಲೆ ಬರೆಯುವುದು ಸುಲಭದ ಮಾತಲ್ಲ. ಸುದೀರ್ಘ ಅವಧಿಗೆ ಮೇಲ್ಮನೆ (ವಿಧಾನ ಪರಿಷತ್) ಸದಸ್ಯರಾಗಿ ಆಯ್ಕೆಯಾಗುವ ಮೂಲಕ ದೇಶದ ಶಾಸಕಾಂಗ ಇತಿಹಾಸದಲ್ಲೇ ಸುವರ್ಣ ಅಕ್ಷರಗಳಲ್ಲಿ ದಾಖಲೆ ಬರೆದವರು ಬಸವರಾಜ ಹೊರಟ್ಟಿಯವರು. ಅವರ ಈ ಅಪ್ರತಿಮ ಸಾಧನೆ, ಶಾಸಕಾಂಗ ಅನುಭವ ಮತ್ತು ವ್ಯಕ್ತಿತ್ವಕ್ಕೆ ಗೌರವ ಸೂಚಿಸುವ ಸಣ್ಣ ಪ್ರಯತ್ನವಾಗಿ, ಇತ್ತೀಚೆಗೆ ಬಿಡುಗಡೆಯಾದ ನನ್ನ ನಾಲ್ಕು ಹೊಸ ಪುಸ್ತಕಗಳಲ್ಲಿ ಒಂದನ್ನು ಅವರಿಗೆ ‘ಅರ್ಪಣೆ’ ಮಾಡಿದ್ದೇನೆ.
ಆ ಪುಸ್ತಕದ ಅರ್ಪಣಾ ಪುಟದಲ್ಲಿ ಹೀಗೆ ಬರೆದಿದ್ದೇನೆ - “ಸುದೀರ್ಘ ಅವಧಿಗೆ ಮೇಲ್ಮನೆ ಸದಸ್ಯರಾಗುವ ಮೂಲಕ ದೇಶದ ಶಾಸಕಾಂಗ ಇತಿಹಾಸದಲ್ಲಿ ದಾಖಲೆ ಬರೆದ, ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿಗಳೂ, ಮೂರು ದಶಕಗಳ ನನ್ನ ಆತ್ಮೀಯ ಸ್ನೇಹಿತರೂ ಆದ ಶ್ರೀ ಬಸವರಾಜ ಹೊರಟ್ಟಿ ಅವರಿಗೆ…”
ಗುರುವಾರ ಸಾಯಂಕಾಲ ಹೊರಟ್ಟಿಯವರನ್ನು ಗಾಂಧಿ ಭವನದ ಪಕ್ಕದಲ್ಲಿರುವ ಅವರ ಅಧಿಕೃತ ನಿವಾಸದಲ್ಲಿ ಭೇಟಿಯಾಗಿ, ಆ ಕೃತಿಯನ್ನು ಪ್ರೀತಿಯಿಂದ ಅವರ ಕೈಗಿತ್ತು ಬಂದೆ.
ಹೊರಟ್ಟಿಯವರನ್ನು ಭೇಟಿಯಾಗುವುದು ಮತ್ತು ಅವರ ಜತೆ ಮಾತುಕತೆ ನಡೆಸುವುದು ಯಾವತ್ತೂ ಖುಷಿ ನೀಡುವ ಅನುಭವ. ಯಾವುದೇ ಮುಖವಾಡವಿಲ್ಲದ, ಸಹಜ ಹಾಗೂ ಸ್ವಚ್ಛಂದವಾದ ಅವರ ‘ಫ್ರೀ ಸ್ಟೈಲ್’ ಮಾತುಗಳನ್ನು ಕೇಳುವುದೇ ಒಂದು ಸುಂದರ ಅನುಭವ. ರಾಜಕೀಯದ ಉನ್ನತ ಸ್ಥಾನದಲ್ಲಿದ್ದರೂ ತಮ್ಮ ಮೂಲ ಸೌಜನ್ಯ, ಗ್ರಾಮೀಣ ಸೊಗಡಿನ ಮಾತು ಮತ್ತು ಆತ್ಮೀಯತೆಯನ್ನು ಉಳಿಸಿಕೊಂಡಿರುವ ಹೊರಟ್ಟಿಯವರೊಂದಿಗಿನ ಒಡನಾಟ ಒಂದು ಸುಂದರ ಅಧ್ಯಾಯವೇ ಸರಿ.
ಮೊನ್ನೆ ಬಿಡುಗಡೆಯಾದ ನನ್ನ ನಾಲ್ಕು ಕೃತಿಗಳನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕೊಡಲೆಂದು ಅವರ ನಿವಾಸಕ್ಕೆ ಹೋಗಿದ್ದೆ. ಮಂತ್ರಿಸ್ಥಾನ ತಪ್ಪಿಸಿಕೊಂಡವರು, ಉತ್ತಮ ಖಾತೆಯ ನಿರೀಕ್ಷೆಯಲ್ಲಿದ್ದವರು, ರಾಜಕೀಯ ಕಾರ್ಯಕರ್ತರು, ಒಂದು ದಿನ ತಡವಾಗಿ ಜನ್ಮದಿನ ನಿಮಿತ್ತ ಶುಭಾಶಯ ಹೇಳಲು ಬಂದವರು... ಹೀಗೆ ಅವರ ನಿವಾಸದಲ್ಲಿ ಕಾಲಿಡಲು ಜಾಗವಿರಲಿಲ್ಲ.
ಆದರೆ ನನ್ನನ್ನು ನೋಡಿದವರೇ ಸಿದ್ದರಾಮಯ್ಯನವರು ಆತ್ಮೀಯವಾಗಿ ಮಾತಾಡಿಸಿದರು. ಎಲ್ಲರ ಅಹವಾಲುಗಳನ್ನು ಆಲಿಸಿ ಕಳುಹಿಸಿದ ನಂತರ, ನನ್ನೊಂದಿಗೆ ಪ್ರತ್ಯೇಕವಾಗಿ ಮಾತನಾಡಲು ಸಮಯ ಮೀಸಲಿಟ್ಟರು.
ಎರಡು ತಿಂಗಳ ಹಿಂದಷ್ಟೇ ನನ್ನ ಇನ್ನೊಂದು ಕೃತಿಯನ್ನು ಸ್ವೀಕರಿಸಿದ್ದ ಅವರು, ನನ್ನ ಕೈಯಲ್ಲಿದ್ದ ನಾಲ್ಕು ಹೊಸ ಪುಸ್ತಕಗಳನ್ನು ನೋಡಿ, “ಇದೇನು ಮತ್ತೆ ನಾಲ್ಕು ಪುಸ್ತಕವಾ?” ಎಂದು ಆಶ್ಚರ್ಯದಿಂದ ನಕ್ಕರು. ಆ ಪುಸ್ತಕಗಳನ್ನು ತಮ್ಮ ಬಳಿಯೇ ಇಟ್ಟುಕೊಂಡರು.
ಕಳೆದ ಮೂವತ್ತು ವರ್ಷಗಳಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿಗಳೆಲ್ಲರನ್ನೂ ತೀರಾ ಹತ್ತಿರದಿಂದ ನೋಡಿದ್ದೇನೆ, ಒಡನಾಡಿದ್ದೇನೆ. ಸಿದ್ದರಾಮಯ್ಯನವರ ಜತೆಗಿನ ಆಪ್ತತೆಯ ತೂಕವೇ ಬೇರೆ ಮತ್ತು ಭಿನ್ನ. ನಮ್ಮದು ಅಧಿಕಾರ, ಅಂತಸ್ತಿಗೆ ದಕ್ಕದ, ಸಿದ್ಧಾಂತಕ್ಕೆ ಸಿಲುಕದ, ಬೇರೆ ‘ವಗೈರೆ’ಗಳಿಗೆ ನಿಲುಕದ ಆತ್ಮೀಯತೆ. ಅದನ್ನು ವಿವರಿಸುವುದು ಕಷ್ಟ.
ಕೆಲವು ಸಂಬಂಧಗಳನ್ನು ಹೆಸರಿಸಬಾರದು, ವ್ಯಾಖ್ಯಾನಿಸಬಾರದು. ಅದನ್ನು ಹಾಗೆಯೇ ಉಳಿಸಿಕೊಳ್ಳಬೇಕು. ಈ ಕಾರಣಕ್ಕಾಗಿಯೇ ಅವರು ಅಧಿಕಾರದಿಂದ ದೂರ ಸರಿದರೂ ಯಾವತ್ತಿನ ಆತ್ಮೀಯತೆಯೇ ನಮ್ಮ ಆಗಾಗಿನ ಭೇಟಿಗೆ ಸೆಲೆ, ನೆಲೆ.
ಬದುಕಿನ ಜಂಜಾಟಗಳ ನಡುವೆ ಮನುಷ್ಯನಿಗೆ ಅತಿ ಹೆಚ್ಚಾಗಿ ಬೇಕಿರುವುದು ತನ್ನ ನೋವನ್ನು ಆಲಿಸುವ ಒಂದು ಸಹಾನುಭೂತಿಯ ಕಿವಿ ಮತ್ತು ಗೊಂದಲಗಳನ್ನು ತಿಳಿಗೊಳಿಸುವ ಆಪ್ತವಾದ ಸಲಹೆ.
'ವಿಶ್ವವಾಣಿ' ದಿನಪತ್ರಿಕೆಯ ಅತ್ಯಂತ ಜನಪ್ರಿಯ ಅಂಕಣದ ಆಯ್ದ ಪ್ರಶ್ನೋತ್ತರಗಳ ಸಂಗ್ರಹವೇ ಈ 'ಆಸ್ಕ್ ದಿ ಎಡಿಟರ್'.
ಇದು ಸಮಕಾಲೀನ ಸಮಾಜದ ಜೀವಂತ ತಲ್ಲಣಗಳಿಗೆ ಹಿಡಿದ ಕೈಗನ್ನಡಿ. ಹೆಂಡತಿ ಗಂಡನ ಮುಂದೆ ಹೇಳಿಕೊಳ್ಳಲಾಗದ ವೇದನೆ, ಗಂಡ-ಹೆಂಡತಿ ಇಬ್ಬರೂ ಸೇರಿ ಮಕ್ಕಳ ಬಳಿ ಹಂಚಿಕೊಳ್ಳಲಾಗದ ತಳಮಳ, ಕಛೇರಿಯ ಉಸಿರುಗಟ್ಟಿಸುವ ರಾಜಕಾರಣ, ಮನೆಯ ನಾಲ್ಕು ಗೋಡೆಗಳ ನಡುವಿನ ಅಸಹಾಯಕತೆ... ಹೀಗೆ ಓದುಗರು ತಮ್ಮ ಅತ್ಯಂತ ಖಾಸಗಿ ಮತ್ತು ಸಂಕಟದ ಕ್ಷಣಗಳನ್ನು ಸಂಪಾದಕನ ಮುಂದೆ ಮುಕ್ತವಾಗಿ ತೆರೆದಿಟ್ಟಿದ್ದಾರೆ.
ಮೇಲ್ನೋಟಕ್ಕೆ ಇವು ವೈಯಕ್ತಿಕ ಸಮಸ್ಯೆಗಳಂತೆ ಕಂಡರೂ, ಇವು ಇಡೀ ಸಮಾಜದ ಪ್ರಾತಿನಿಧಿಕ ಬಿಕ್ಕಟ್ಟುಗಳೂ ಹೌದು. ಯಾವುದೇ ಮನೋವೈದ್ಯ ಅಥವಾ ಪರಿಣತ ಸಲಹೆಗಾರನ ಹಣೆಪಟ್ಟಿಯಿಲ್ಲದೇ, ಕೇವಲ ಬದುಕಿನ ಅನುಭವ, ಸಂಯಮ, ತೀವ್ರ ಕಾಳಜಿ ಮತ್ತು ಜವಾಬ್ದಾರಿಯಿಂದ ನಾನು ಈ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ.
ಈ ಮಾಲಿಕೆಯಲ್ಲಿ ಹೊರಬರುತ್ತಿರುವ ನಾಲ್ಕನೇ ಕೃತಿ ಇದು. ಒಂಟಿತನ ಮತ್ತು ಗೊಂದಲಗಳಿಂದ ಬಳಲುತ್ತಿರುವ ಆಧುನಿಕ ಮನಸ್ಸುಗಳಿಗೆ ಧೈರ್ಯ ತುಂಬುವ, ಮುಗುಳ್ನಗೆ ಬೀರುವಂತೆ ಮಾಡುವ ಮತ್ತು ಬದುಕಿನ ದಾರಿಯನ್ನು ಸುಲಭವಾಗಿಸುವ ಈ ಕೃತಿ ಅಕ್ಷರ ರೂಪದ ಆಪ್ತಮಿತ್ರ!
ಈಗ ತಾನೆ ಈ ಕೃತಿ ಅಚ್ಚಿನ ಮನೆಯಿಂದ ಗರಿಗರಿಯಾಗಿ ಬಂದು ಭಾನುವಾರ ಬಿಡುಗಡೆಗೆ ಸಜ್ಜಾಗಿದೆ.
ಕರ್ನಾಟಕದ ರಾಜಕೀಯ ಮತ್ತು ಸಾಮಾಜಿಕ ಇತಿಹಾಸದಲ್ಲಿ ಮಾಜಿ ಪ್ರಧಾನಮಂತ್ರಿ ಶ್ರೀ ಹೆಚ್.ಡಿ. ದೇವೇಗೌಡರ ಕುಟುಂಬಕ್ಕೆ ಒಂದು ವಿಶಿಷ್ಟ ಸ್ಥಾನವಿದೆ. ಈ ಬೃಹತ್ ಆಲದ ಮರಕ್ಕೆ ತಾಯಿ ಬೇರಿನಂತೆ , ಸನ್ನಿಧಿಯಂತೆ ನೆರಳಾಗಿ ನಿಂತವರು ಶ್ರೀಮತಿ ಚೆನ್ನಮ್ಮ ದೇವೇಗೌಡರು. ಕಳೆದ ಜುಲೈ 18 ರಂದು ಇಹಲೋಕ ತ್ಯಜಿಸಿದ ಚೆನ್ನಮ್ಮನವರ ವೈಕುಂಠ ಸಮಾರಾಧನೆ ಮತ್ತು ಉತ್ತರ ಕ್ರಿಯಾದಿ ಕಾರ್ಯಕ್ರಮವು ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಐತಿಹಾಸಿಕ ಮಾವಿನಕೆರೆ ಶ್ರೀ ರಂಗನಾಥ ಸ್ವಾಮಿ ಬೆಟ್ಟದ ತಪ್ಪಲು ಪ್ರದೇಶದಲ್ಲಿ ಅತ್ಯಂತ ಶ್ರದ್ಧಾ-ಭಕ್ತಿಯಿಂದ ಗುರುವಾರ ಜರುಗಿತು.
ಖುದ್ದು ಕೇಂದ್ರ ಸಚಿವರಾದ ಶ್ರೀ ಹೆಚ್ ಡಿ ಕುಮಾರಸ್ವಾಮಿ ಅವರೇ ಅಭಿಮಾನದಿಂದ ಆಹ್ವಾನ ನೀಡಿದ್ದರು. ಈ ಭವ್ಯ ಹಾಗೂ ಭಕ್ತಿಪೂರ್ವಕ ಸಮಾರಂಭದಲ್ಲಿ ಪಾಲ್ಗೊಂಡು, ಆ ಮಹಾತಾಯಿಯ ಅಗಲಿಕೆಗೆ ಸಂತಾಪ ಸೂಚಿಸಿ, ಅವರ ಆತ್ಮಕ್ಕೆ ಚಿರಶಾಂತಿ ಕೋರುವ ಅವಕಾಶ ನನಗೆ ಸಿಕ್ಕಿದ್ದು ಸದಾ ನೆನಪಿನಲ್ಲಿ ಉಳಿಯುವ ಕ್ಷಣ.
ದೇವೇಗೌಡರ ಕುಟುಂಬದೊಂದಿಗೆ ನನ್ನದು ಸುಮಾರು ಮೂರು ದಶಕಗಳಿಗೂ ಹೆಚ್ಚಿನ ಸುದೀರ್ಘ ಒಡನಾಟ. ಆ ಕುಟುಂಬದ ಹಿರಿಯ ಜೀವ ಚೆನ್ನಮ್ಮನವರನ್ನು ನೆನೆದರೆ, ಅವರ ಮುಖದಲ್ಲಿದ್ದ ಆ ಮಮತೆ, ವಾತ್ಸಲ್ಯ ಮತ್ತು ಸೌಜನ್ಯ ಕಣ್ಣಮುಂದೆ ಹಾದುಹೋಗುತ್ತದೆ.
ನಾನು ದೇವೇಗೌಡರ ಮನೆಗೆ ಹೋದಾಗಲೆಲ್ಲ, ಚೆನ್ನಮ್ಮನವರು ನನ್ನನ್ನು ಅತ್ಯಂತ ಪ್ರೀತಿಯಿಂದ ಉಭಯಕುಶಲೋಪರಿ ವಿಚಾರಿಸುತ್ತಿದ್ದರು. ಅಷ್ಟೇ ಅಲ್ಲ, ಬಿಸಿಬಿಸಿಯಾದ ಕಾಫಿ ನೀಡಿ ಆದರಿಸುತ್ತಿದ್ದರು.
ಚೆನ್ನಮ್ಮನವರ ಮಾತೃತ್ವ ಮತ್ತು ಉದಾರ ಗುಣಕ್ಕೆ ಸಾಕ್ಷಿಯಾದ ಅನೇಕ ಘಟನೆಗಳಲ್ಲಿ ಒಂದನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಮೂರು ವರ್ಷಗಳ ಹಿಂದೆ ಬೆಂಗಳೂರಿನ ಬ್ಯಾಟರಾಯನಪುರದ ಪ್ರಸಿದ್ಧ ಶ್ರೀ ಗಾಳಿ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಅವರ ಅಕಸ್ಮಾತ್ ಭೇಟಿಯಾಗಿತ್ತು. ಆ ಸಂದರ್ಭದಲ್ಲಿ ಅವರು ನನ್ನೊಡನೆ ಸುಮಾರು ಇಪ್ಪತ್ತು ನಿಮಿಷಗಳ ಕಾಲ ಪ್ರೀತಿಯಿಂದ ಹಲವಾರು ವಿಷಯಗಳ ಬಗ್ಗೆ ಆಪ್ತವಾಗಿ ಮಾತನಾಡಿದ್ದರು.
ಆ ದಿನ ನನ್ನ ಜತೆಯಲ್ಲಿ ನನ್ನ ಪತ್ನಿಯೂ ಇದ್ದಳು. ಚೆನ್ನಮ್ಮನವರು ನನ್ನ ಪತ್ನಿಯನ್ನು ಹತ್ತಿರ ಕರೆದು, ಅತ್ಯಂತ ವಾತ್ಸಲ್ಯದಿಂದ ಸ್ವತಃ ತಮ್ಮ ಕೈಯಾರ ಬಳೆ ತೊಡಿಸಿ ಹಾರೈಸಿದ್ದರು. ಒಬ್ಬ ಪ್ರಧಾನಿಯ ಧರ್ಮಪತ್ನಿ ಎನ್ನುವ ಯಾವುದೇ ಹಮ್ಮು-ಬಿಮ್ಮು ಇಲ್ಲದೇ, ಸಾಮಾನ್ಯ ಗೃಹಿಣಿಯಂತೆ, ಹಿರಿಯಕ್ಕನಂತೆ ಅವರು ತೋರಿಸಿದ ಆ ಪ್ರೀತಿ ಮತ್ತು ಗೌರವ ನನ್ನ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿ ಉಳಿದಿದೆ.
ಚೆನ್ನಮ್ಮ ದೇವೇಗೌಡರು ಆಧ್ಯಾತ್ಮಿಕ ಚಿಂತನೆಯುಳ್ಳವರಾಗಿದ್ದರು. ಧರ್ಮ, ಪೂಜೆ-ಪುನಸ್ಕಾರ, ದೇವತಾ ಕಾರ್ಯಗಳು ಮತ್ತು ದಾನ-ಧರ್ಮಗಳಲ್ಲಿ ಅವರು ಸದಾ ಮುಂದು. ದೇವೇಗೌಡರ ಸುದೀರ್ಘ ರಾಜಕೀಯ ಜೀವನದ ಏಳು-ಬೀಳುಗಳಲ್ಲಿ, ಅವರ ಕುಟುಂಬ ಎದುರಿಸಿದ ಸವಾಲುಗಳಲ್ಲಿ ಚೆನ್ನಮ್ಮನವರು ಮಾಡಿದ ದೇವತಾ ಕಾರ್ಯಗಳ ಪುಣ್ಯ ಮತ್ತು ಅವರ ತಪಃಶಕ್ತಿ ಪ್ರಬಲವಾದ ಶ್ರೀರಕ್ಷೆಯಾಗಿ ನಿಂತಿದೆ ಎಂದು ಅವರನ್ನು ನೋಡಿದಾಗಲೆಲ್ಲ ನನಗೆ ಅನಿಸುತ್ತಿತ್ತು.
ಶ್ರೀಮತಿ ಚೆನ್ನಮ್ಮನವರು ನಿಧನರಾದಾಗ ನಾನು ಪ್ರವಾಸದಲ್ಲಿದ್ದ ಕಾರಣ ಅವರ ಅಂತಿಮ ದರ್ಶನ ಪಡೆಯಲು ಸಾಧ್ಯವಾಗಿರಲಿಲ್ಲ. ಆದ್ದರಿಂದಲೇ, ಇಂದು ಹೊಳೆನರಸೀಪುರದಲ್ಲಿ ನಡೆದ ಅವರ ವೈಕುಂಠ ಸಮಾರಾಧನೆ ಕಾರ್ಯಕ್ರಮದಲ್ಲಿ ಖುದ್ದಾಗಿ ಭಾಗವಹಿಸಿ ನಮನ ಸಲ್ಲಿಸಿದೆ.
ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿಗಳಾದ ಶ್ರೀ ಹೆಚ್.ಡಿ. ದೇವೇಗೌಡರು, ಕೇಂದ್ರ ಸಚಿವರಾದ ಶ್ರೀ ಹೆಚ್.ಡಿ. ಕುಮಾರಸ್ವಾಮಿ, ಮಾಜಿ ಸಚಿವರಾದ ಶ್ರೀ ಹೆಚ್.ಡಿ. ರೇವಣ್ಣ, ಸಂಸದರಾದ ಶ್ರೀ ಡಾ. ಮಂಜುನಾಥ್, ಶ್ರೀ ಬಾಲಕೃಷ್ಣೇಗೌಡ, ಶ್ರೀಮತಿ ಭವಾನಿ ರೇವಣ್ಣ ಹಾಗೂ ಶ್ರೀ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಕುಟುಂಬದ ಪ್ರತಿಯೊಬ್ಬ ಸದಸ್ಯರನ್ನು ಭೇಟಿ ಮಾಡಿ, ಸಂತಾಪವನ್ನು ಸಲ್ಲಿಸಿದೆ.
ಮಾವಿನಕೆರೆ ಶ್ರೀ ರಂಗನಾಥ ಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ನಡೆದ ಈ ಉತ್ತರ ಕ್ರಿಯಾದಿ ಕಾರ್ಯಕ್ರಮವು ಅತ್ಯಂತ ಅಚ್ಚುಕಟ್ಟಾಗಿ ಜರುಗಿತು. ಸುಮಾರು ಒಂದೂವರೆ ಲಕ್ಷಕ್ಕೂ ಅಧಿಕ ಜನ ಸಾರ್ವಜನಿಕರು, ಅಭಿಮಾನಿಗಳು, ಮತ್ತು ನಾಡಿನ ವಿವಿಧ ಮೂಲೆಗಳಿಂದ ಆಗಮಿಸಿದ್ದ ಗಣ್ಯರು ಈ ವೈಕುಂಠ ಸಮಾರಾಧನೆಯಲ್ಲಿ ಪಾಲ್ಗೊಂಡು ಮೃತರ ಆತ್ಮಕ್ಕೆ ಪ್ರಾರ್ಥಿಸಿದರು. ಇಷ್ಟೊಂದು ಬೃಹತ್ ಸಂಖ್ಯೆಯ ಜನಸಂದಣಿ ಇದ್ದರೂ, ಆಹಾರ, ಕುಡಿಯುವ ನೀರು ಮತ್ತು ಆಸನದ ವ್ಯವಸ್ಥೆಗಳನ್ನು ಅತ್ಯಂತ ಶಿಸ್ತುಬದ್ಧವಾಗಿ ಮಾಡಲಾಗಿತ್ತು.
ಈ ಕಾರ್ಯಕ್ರಮದ ಅತ್ಯಂತ ವಿಶೇಷ ಮತ್ತು ಭಾವನಾತ್ಮಕ ಅಂಶವೆಂದರೆ, ಚೆನ್ನಮ್ಮನವರ ನಿತ್ಯ ಮುಕ್ತಿ ಧಾಮ ಅಥವಾ ಸಮಾಧಿಯನ್ನು ಪವಿತ್ರ ಶ್ರೀ ರಂಗನಾಥ ಸ್ವಾಮಿ ದೇವಾಲಯಕ್ಕೆ ಅಭಿಮುಖವಾಗಿ ನಿರ್ಮಿಸಿರುವುದು. ಜೀವಮಾನವಿಡೀ ದೇವರ ಸೇವೆಯಲ್ಲಿ ನಿರತರಾಗಿದ್ದ ಆ ಮಹಾತಾಯಿಗೆ, ಸಾವಿನ ನಂತರವೂ ಶ್ರೀ ರಂಗನಾಥ ಸ್ವಾಮಿಯ ದಿವ್ಯ ದೃಷ್ಟಿ ನಿರಂತರವಾಗಿ ಬೀಳುವಂತೆ ನಿರ್ಮಿಸಲಾಗಿರುವ ಈ ಸಮಾಧಿ ಸ್ಥಳ ನಿಜಕ್ಕೂ ಅರ್ಥಪೂರ್ಣವಾಗಿದೆ.
ಶ್ರೀಮತಿ ಚೆನ್ನಮ್ಮ ದೇವೇಗೌಡರ ಅಗಲಿಕೆಯಿಂದ ನಾಡು ಒಬ್ಬ ಮಾತೃಹೃದಯಿ ಹಿರಿಯ ಚೇತನವನ್ನು ಕಳೆದುಕೊಂಡಿದೆ. ಭಗವಂತನು ಅವರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ ಮತ್ತು ಈ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ದೇವೇಗೌಡರ ಕುಟುಂಬ ವರ್ಗಕ್ಕೆ ಹಾಗೂ ಅವರ ಅಸಂಖ್ಯ ಅಭಿಮಾನಿಗಳಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
ಪುಸ್ತಕವೊಂದು ಮುದ್ರಣಗೊಂಡು ಕೈಗೆ ಸಿಕ್ಕಾಗ ಲೇಖಕನಿಗೆ ಆಗುವ ಆನಂದ, ತಾಯಿಯೊಬ್ಬಳಿಗೆ ನವಜಾತ ಶಿಶುವನ್ನು ಮೊದಲ ಬಾರಿಗೆ ಮುಖಾಮುಖಿ ನೋಡಿದಾಗ ಆಗುವ ಪರಮಾನಂದಕ್ಕೆ ಸಮಾನವಾದುದು. ಮನದಾಳದ ಮೂಸೆಯಲ್ಲಿ ರೂಪುಗೊಂಡ ಆಲೋಚನೆಗಳು ಅಕ್ಷರಗಳಾಗಿ, ನಂತರ ಪುಟಗಳಾಗಿ, ಕೊನೆಗೆ ಸುಂದರವಾದ ಗಟ್ಟಿ ಹೊದಿಕೆಯ ಪುಸ್ತಕವಾಗಿ ಕೈಗೆ ತಲುಪುವ ಈ ಸುದೀರ್ಘ ಪಯಣ ಅತ್ಯಂತ ರೋಮಾಂಚಕಾರಿ.
‘ಸಂಪಾದಕರ ಸದ್ಯಶೋಧನೆ - ಭಾಗ ೯’ ಹೊರಬಂದಿರುವ ಈ ಸಂದರ್ಭ, ಒಬ್ಬ ಬರಹಗಾರನ ಪರಿಶ್ರಮಕ್ಕೆ ಸಿಕ್ಕ ಸಂತೃಪ್ತಿ. ಮೊದಲ ಪದದಿಂದ ಆರಂಭವಾಗುವ ಬರವಣಿಗೆಯ ಪಯಣ ಮೇಲ್ನೋಟಕ್ಕೆ ಸುಲಭವೆನಿಸಿದರೂ, ಅದರ ಹಿಂದಿರುವ ಶ್ರಮ ಮತ್ತು ಏಕಾಗ್ರತೆ ಅಪಾರ.
ಆಲೋಚನೆಗಳನ್ನು ಪದಗಳಲ್ಲಿ ಪೋಣಿಸುವುದು, ವಿಷಯದ ಸತ್ಯಾಸತ್ಯತೆಯನ್ನು ಪರಿಶೀಲಿಸುವುದು, ವಾಕ್ಯಗಳ ಶೈಲಿ ಹಾಗೂ ಓದಿನ ಹರಿವನ್ನು ಕಾಯ್ದುಕೊಳ್ಳುವುದು—ಇವೆಲ್ಲವೂ ಲೇಖಕನ ಸಹನೆ ಮತ್ತು ಸೃಜನಶೀಲತೆಗೆ ಒಡ್ಡುವ ದೊಡ್ಡ ಪರೀಕ್ಷೆಗಳು.
ಬರವಣಿಗೆಯ ಹಂತ ಮುಗಿದ ನಂತರ ಆರಂಭವಾಗುವ ಮುದ್ರಣದ ಹಂತಗಳು ಲೇಖಕನನ್ನು ಹಗಲಿರುಳು ಕಾಡುತ್ತವೆ. ಹಸ್ತಪ್ರತಿಯ ತಿದ್ದುಪಡಿ (Proofreading), ಪುಟ ವಿನ್ಯಾಸ (Page Layout), ರಕ್ಷಾಪಟದ ವಿನ್ಯಾಸ (Cover Design), ಮುದ್ರಣ ಯಂತ್ರಗಳ ಕಾವಿನಲ್ಲಿ ಬೆಂದು ಬರುವ ಪುಟಗಳು ಮತ್ತು ಕೊನೆಯ ಕಟ್ಟುಗಳ ಜೋಡಣೆ—ಹೀಗೆ ಪ್ರತಿಯೊಂದು ಹಂತದಲ್ಲೂ ‘ಪುಸ್ತಕ ಹೇಗೆ ಮೂಡಿಬರಬಹುದು?’ ಎಂಬ ಕುತೂಹಲ ಹಾಗೂ ಸಣ್ಣ ಮಟ್ಟದ ಕಾತರ ಲೇಖಕನನ್ನು ಕೈಹಿಡಿದು ಜಗ್ಗುತ್ತಿರುತ್ತದೆ. ಮುದ್ರಣಾಲಯದ ಪ್ರತಿಯೊಂದು ತಾಂತ್ರಿಕ ವಿವರವೂ ಬರಹಗಾರನ ಹೃದಯ ಬಡಿತವನ್ನು ಹೆಚ್ಚಿಸುತ್ತದೆ.
ಅಂತಿಮವಾಗಿ, ಹೊಸ ಪುಸ್ತಕ ಮುದ್ರಣಗೊಂಡು, ಅಚ್ಚುಕೂಟದ ಘಮಲಿನೊಂದಿಗೆ ಮೊದಲ ಬಾರಿಗೆ ಲೇಖಕನ ಕೈಗೆ ಸಿಕ್ಕಾಗ ಆಗುವ ಅನುಭವ ವರ್ಣನಾತೀತ. ಆ ರೋಮಾಂಚನ, ಧನ್ಯತೆ ಮತ್ತು ಸಾರ್ಥಕತೆಯ ಭಾವನೆಯನ್ನು ಪದಗಳಲ್ಲಿ ಕಟ್ಟಿಕೊಡುವುದು ಅಸಾಧ್ಯ. ಕೈಯಲ್ಲಿ ಹಿಡಿದ ಆ ಹೊತ್ತಗೆಯ ತೂಕ ಬರಿ ಕಾಗದದ್ದಲ್ಲ…ಬದಲಿಗೆ ಆ ಹೊತ್ತಗೆಯ ಹಿಂದೆ ಕಳೆದ ನೂರಾರು ಗಂಟೆಗಳ ಚಿಂತನೆ, ಅಧ್ಯಯನ, ಅನುಭವ ಮತ್ತು ಅಪ್ರತಿಮ ಶ್ರಮದ ತೂಕ.
ಪ್ರಚಲಿತ ವಿದ್ಯಮಾನಗಳನ್ನು, ಲೋಕಾನುಭವವನ್ನು ಹಾಗೂ ಗಂಭೀರ ವಿಚಾರಗಳನ್ನು ಓದುಗರಿಗೆ ಮುಟ್ಟಿಸುವ ‘ಸಂಪಾದಕರ ಸದ್ಯಶೋಧನೆ’ ಸರಣಿಯ ೯ನೇ ಭಾಗವು ಓದುಗರ ಕೈಸೇರಲು ಸಿದ್ಧವಾಗಿದೆ.
ಅಕ್ಷರಗಳನ್ನು ಪ್ರೀತಿಸುವ ಪ್ರತಿಯೊಬ್ಬ ಲೇಖಕನಿಗೂ ತನ್ನ ಕೃತಿಯು ಮುದ್ರಿತ ರೂಪದಲ್ಲಿ ಹೊರಬರುವ ಕ್ಷಣವೇ ಅತ್ಯಂತ ದೊಡ್ಡ ಸಂಭ್ರಮ ಮತ್ತು ಪವಿತ್ರ ಕ್ಷಣ. ಈ ಹೊಸ
ಬರುವ ಭಾನುವಾರ, ಆಗಸ್ಟ್ 2 ರಂದು “ವಿಶ್ವವಾಣಿ ಪುಸ್ತಕ” ಪ್ರಕಾಶನ ಸಂಸ್ಥೆಯಿಂದ ಒಂಬತ್ತು ಪುಸ್ತಕಗಳು ಲೋಕಾರ್ಪಣೆಗೊಳ್ಳಲಿವೆ. ಈ ಪೈಕಿ ನನ್ನದು ನಾಲ್ಕು ಪುಸ್ತಕಗಳು. ಕಿರಣ್ ಉಪಾಧ್ಯಾಯ, ರೂಪಾ ಗುರುರಾಜ, ರಾಜು ಅಡಕಳ್ಳಿ, ಮೋಹನ ವಿಶ್ವ ಹಾಗೂ ಶಿಶಿರ ಹೆಗಡೆ ಅವರ ತಲಾ ಒಂದು ಪುಸ್ತಕ ಅಂದು ಬಿಡುಗಡೆ ಆಗಲಿವೆ.
ಈ ಎಲ್ಲ ಕೃತಿಗಳನ್ನು ಖ್ಯಾತ ನಟರೂ, ಪದ್ಮಭೂಷಣ ಪುರಸ್ಕೃತರೂ, ಆತ್ಮೀಯರೂ ಆದ ಶ್ರೀ ಅನಂತನಾಗ್ ಅವರು ಬಿಡುಗಡೆ ಮಾಡಲಿದ್ದಾರೆ. ಅಂದು ಮುಖ್ಯ ಅತಿಥಿಯಾಗಿ ರಾಷ್ಟ್ರವಾದಿ ಚಿಂತಕರಾದ್ ಶ್ರೀ ಚಕ್ರವರ್ತಿ ಸೂಲಿಬೆಲೆ ನಮ್ಮೊಂದಿಗಿರುತ್ತಾರೆ. ಖ್ಯಾತ ವಿದ್ವಾಂಸರೂ, ವಿಮರ್ಶಕರೂ ಆದ ಶ್ರೀ ಗ.ನಾ.ಭಟ್ಟ ಎಲ್ಲ ಕೃತಿಗಳನ್ನು ಪರಿಚಯಿಸಲಿದ್ದಾರೆ.
ವೈವಿಧ್ಯಮಯ ವಿಚಾರಗಳು, ವಿಭಿನ್ನ ಲೇಖನ ಶೈಲಿ, ತತ್ವಚಿಂತನೆ ಮತ್ತು ಅತ್ಯಂತ ಸುಂದರವಾಗಿ ಮೂಡಿಬಂದಿರುವ ಈ ಒಂಬತ್ತೂ ಪುಸ್ತಕಗಳು ಓದುಗರ ಅಂತರಂಗವನ್ನು ತಲುಪಲಿವೆ ಎಂಬ ವಿಶ್ವಾಸ ನಮ್ಮದು.
ಈ ಕಾರ್ಯಕ್ರಮದಲ್ಲಿ ನಿಮ್ಮ ಉಪಸ್ಥಿತಿಯನ್ನು ನಾನು ಬಯಸುತ್ತೇನೆ. ಕಳೆದ ಹತ್ತು ವರ್ಷಗಳಿಂದ ಈ ರೀತಿಯ ಪುಸ್ತಕ ಬಿಡುಗಡೆ ಸಂಭ್ರಮ ಆಚರಣೆಯನ್ನು ಅತ್ಯಂತ ಆಸ್ಥೆಯಿಂದ ಮಾಡಿಕೊಂಡು ಬಂದಿದ್ದೇವೆ. ಪ್ರತಿ ಕಾರ್ಯಕ್ರಮದ ಮೆರುಗು ಹೆಚ್ಚಿಸಿದವರು ನೀವೇ. ಈ ಬಾರಿಯೂ ನೀವು ನಮ್ಮೊಂದಿಗಿರಬೇಕು. ಕಾರ್ಯಕ್ರಮದ ಬಳಿಕ ಲಘು ಭೋಜನ ವ್ಯವಸ್ಥೆಯೂ ಇದೆ. ಅಂದು ನಿಮ್ಮ ನಿರೀಕ್ಷೆಯಲ್ಲಿರುತ್ತೇನೆ.
“ಅಂಟಾರ್ಟಿಕಾಗೆ ಹೋಗಿ ಅದೇನ್ರೀ ಮಂಜು, ಎಲ್ಲಿ ನೋಡಿದರೂ ಹಿಮ ಎಂದರೆ ಹೇಗೋ, ಚಿರಾಪುಂಜಿಗೆ ಹೋಗಿ ‘ಅದೆಂಥ ಮಳೆ ಅಂತೀರಿ..’ ಎಂದು ರಾಗ ಎಳೆಯುವುದೂ ಒಂದೇ.”
ಅಂಟಾರ್ಟಿಕಾದಲ್ಲಿ ಹಿಮ ಹೇಗೆ ಸಹಜವೋ, ಚಿರಾಪುಂಜಿಯಲ್ಲಿ ಮಳೆಯೂ ಹಾಗೆಯೇ ಸಹಜ ಮತ್ತು ಅಷ್ಟೇ ತೀವ್ರ. ಅಲ್ಲಿಗೆ ಹೋಗಿ ಮಳೆಯ ಬಗ್ಗೆ ಅಚ್ಚರಿ ಪಡುವುದರಲ್ಲಿ ಅರ್ಥವಿಲ್ಲ, ಏಕೆಂದರೆ ಮಳೆಯೇ ಆ ನಾಡಿನ ಉಸಿರು, ಆ ನಾಡಿನ ಗುರುತು.
ಆದರೂ ಮಳೆಗೇ ಕನಿಕರ ಬರುವಷ್ಟು ಮಳೆ ಬಿಡಿ...’ ಎನ್ನದೇ ವಿಧಿಯಿಲ್ಲ.
ಮೇಘಾಲಯ ರಾಜ್ಯದ ಚಿರಾಪುಂಜಿ (ಸ್ಥಳೀಯವಾಗಿ ಸೋಹ್ರಾ) ಪ್ರಪಂಚದಲ್ಲೇ ಅತಿ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಪ್ರಮುಖವಾದದ್ದು. ಇಲ್ಲಿನ ಭೌಗೋಳಿಕ ಹಿನ್ನೆಲೆಯೇ ಇಷ್ಟೊಂದು ಮಳೆಗೆ ಮುಖ್ಯ ಕಾರಣವಾಗಿದೆ. ಖಾಸಿ ಬೆಟ್ಟಗಳ ಸಾಲಿನಲ್ಲಿ ನೆಲೆಸಿರುವ ಈ ಪ್ರದೇಶವು ಬಂಗಾಳ ಕೊಲ್ಲಿಯಿಂದ ಬರುವ ಮುಂಗಾರು ಮಾರುತಗಳನ್ನು ನೇರವಾಗಿ ಎದುರಿಸುತ್ತದೆ.
ಈ ಆರ್ದ್ರತೆಯಿಂದ ಕೂಡಿದ ಮಾರುತಗಳು ಬೆಟ್ಟಗಳನ್ನು ದಾಟಲಾಗದೇ, ಒಂದೇ ಸಮನೆ ಜಲಪಾತಗಳಂತೆ ಧುಮ್ಮಿಕ್ಕುತ್ತವೆ.
ಚಿರಾಪುಂಜಿಯ ಮಳೆಯನ್ನು ನೋಡುವುದೇ ಒಂದು ಅದ್ಭುತ ಅನುಭವ. ಇಲ್ಲಿ ಮಳೆ ಕೇವಲ ಹನಿಗಳಾಗಿ ಬೀಳುವುದಿಲ್ಲ, ಬದಲಿಗೆ ಆಕಾಶಕ್ಕೆ ತೂತು ಬಿದ್ದಂತೆ ಧಾರಾಕಾರವಾಗಿ ಸುರಿಯುತ್ತದೆ. ವಾರಗಟ್ಟಲೆ, ತಿಂಗಳುಗಟ್ಟಲೆ ಸೂರ್ಯನ ಮುಖವೇ ಕಾಣದಂತೆ ನಿರಂತರವಾಗಿ ಮಳೆ ಸುರಿಯುವಾಗ, ಪ್ರಕೃತಿಯೇ ಮಳೆಯ ಅಬ್ಬರಕ್ಕೆ ಬೆಂಡಾಗಿಹೋಗಿದೆಯೇನೋ ಅನಿಸುತ್ತದೆ.
ಮಳೆಗೇ ತನ್ನ ಮೇಲೆ ತನಗೆ ಕನಿಕರ ಬಂದು ಸಣ್ಣದಾಗಿ ಬಿಡುವು ನೀಡಬಾರದೇ ಎನಿಸುವಷ್ಟು ಪ್ರವಾಹೋಪಾದಿಯಲ್ಲಿ ನೀರು ಹರಿಯುತ್ತದೆ. ಸುತ್ತಲಿನ ಕಂದರಗಳು, ಬೆಟ್ಟದ ಇಳಿಜಾರುಗಳು ನೂರಾರು ಜಲಪಾತಗಳಾಗಿ ಮಾರ್ಪಡುತ್ತವೆ. ನೋಡುಗರಿಗೆ ಇದು ನಯನಮನೋಹರ ದೃಶ್ಯವಾದರೂ, ಅಲ್ಲಿನ ನಿರಂತರ ಆರ್ಭಟ ಪ್ರಕೃತಿಯ ರೌದ್ರಾವತಾರವನ್ನು ಕಣ್ಣಿಗೆ ಕಟ್ಟುತ್ತದೆ.
ಆದರೆ, ಇಷ್ಟೊಂದು ಮಳೆ ಬೀಳುವ ಈ ನಾಡಿನ ಜನರ ಬದುಕು ಮಾತ್ರ ಅಷ್ಟೇ ಸಂಕೀರ್ಣ ಮತ್ತು ಸವಾಲುಗಳಿಂದ ಕೂಡಿದೆ. ನಿರಂತರ ಮಳೆಯಿಂದಾಗಿ ಇಲ್ಲಿನ ದೈನಂದಿನ ಜೀವನ ಸಂಪೂರ್ಣ ಗಾಳುಮೇಳು. ಬಟ್ಟೆಗಳು ಒಣಗುವುದಿಲ್ಲ, ಮನೆಯ ಗೋಡೆಗಳ ಮೇಲೆಲ್ಲ ಪಾಚಿ ಬೆಳೆಯುತ್ತದೆ, ದಿನಸಿ ಪದಾರ್ಥಗಳು ತೇವಗೊಳ್ಳುತ್ತವೆ. ಮನೆಯೊಳಗೆ ನೀರಿನ ಒರತೆ ಜಿನುಗುತ್ತದೆ. ಮಾಡುಗಳು (ಚಾವಣಿ) ಸೋರುತ್ತವೆ. ಕಪಾಟಿನೊಳಗೆ ನೀರಿನ ಪಸೆ ಕಟ್ಟಿಕೊಳ್ಳುತ್ತವೆ.
ಎಲ್ಲಕ್ಕಿಂತ ದೊಡ್ಡ ವಿಪರ್ಯಾಸವೆಂದರೆ, ಜಗತ್ತಿನಲ್ಲೇ ಅತಿ ಹೆಚ್ಚು ಮಳೆ ಬೀಳುವ ಈ ಜಾಗದಲ್ಲಿ ಕುಡಿಯುವ ನೀರಿಗೆ ತತ್ವಾರ!
ಹೌದು, ಕಡಿದಾದ ಬೆಟ್ಟದ ಇಳಿಜಾರುಗಳ ಕಾರಣದಿಂದಾಗಿ ಬೀಳುವ ಮಳೆನೀರೆಲ್ಲವೂ ಕ್ಷಣಾರ್ಧದಲ್ಲಿ ಹರಿದು ಬಾಂಗ್ಲಾದ ಬಯಲು ಸೀಮೆಯನ್ನು ಸೇರುತ್ತದೆ. ಭೂಮಿ ನೀರನ್ನು ಹಿಡಿದಿಟ್ಟುಕೊಳ್ಳದ ಕಾರಣ, ಮಳೆಗಾಲ ಮುಗಿಯುತ್ತಿದ್ದಂತೆ ಇಲ್ಲಿನ ಜನ ಕುಡಿಯುವ ನೀರಿಗಾಗಿ ಪರದಾಡಬೇಕಾಗುತ್ತದೆ. ಇದನ್ನು ‘ಹಸಿರು ಮರುಭೂಮಿ’ ಅಂತ ಕರೆಯುತ್ತಾರೆ ಅಂದ್ರೆ ಆಶ್ಚರ್ಯವಾಗಬಹುದು.
ಈ ಅತಿಯಾದ ಮಳೆಗೆ ಅಲ್ಲಿನ ಜನರು ಕಂಡುಕೊಂಡ ಸಹಜ ಪರಿಹಾರವೇ 'ಜೀವಂತ ಬೇರುಗಳ ಸೇತುವೆ' (Living Root Bridges). ರಬ್ಬರ್ ಮರಗಳ ಬೇರುಗಳನ್ನು ಪರಸ್ಪರ ಹೆಣೆದು ನದಿಗಳನ್ನು ದಾಟಲು ಮಾಡಿಕೊಂಡ ಈ ಸೇತುವೆಗಳು ಪ್ರಕೃತಿಯೊಂದಿಗೆ ಮನುಷ್ಯ ಹೇಗೆ ಬದುಕಬೇಕೆಂಬುದಕ್ಕೆ ಅತ್ಯುತ್ತಮ ಉದಾಹರಣೆ. ಮಳೆಯ ತೀವ್ರತೆಗೆ ಕಬ್ಬಿಣ ಅಥವಾ ಕಾಂಕ್ರೀಟ್ ಸೇತುವೆಗಳು ತುಕ್ಕು ಹಿಡಿದು ಹಾಳಾಗಬಹುದು, ಆದರೆ ಈ ಬೇರುಗಳ ಸೇತುವೆಗಳು ಮಳೆಯಲ್ಲೇ ಮತ್ತಷ್ಟು ಗಟ್ಟಿಯಾಗುತ್ತವೆ.
ಚಿರಾಪುಂಜಿಯ ಮಳೆ ಕೇವಲ ಒಂದು ಹವಾಮಾನ ಪ್ರಕ್ರಿಯೆಯಲ್ಲ; ಅದೊಂದು ಜೀವರಾಶಿಯ ಅಸ್ತಿತ್ವ. ಮಳೆಗೇ ಕನಿಕರ ಬರುವಷ್ಟು ಸುರಿಯುವ ಈ ಜಲಧಾರೆ, ಮಾನವನಿಗೆ ಪ್ರಕೃತಿಯ ಅಗಾಧ ಶಕ್ತಿಯ ಮುಂದೆ ತಾನು ಎಷ್ಟು ನಗಣ್ಯ ಎಂಬುದನ್ನು ನೆನಪಿಸುತ್ತಲೇ ಇರುತ್ತದೆ.
(ನಾಳಿನ “ಪ್ರವಾಸಿ ಪ್ರಪಂಚ”ದಲ್ಲಿ ಚಿರಾಪುಂಜಿಯ ಮಳೆ ಅನುಭವದ ಕುರಿತು ಬರೆದಿದ್ದೇನೆ. ಸಾಧ್ಯವಾದರೆ ಓದಿ)
ತನುಜಾ ಈಗ “ಡಾ. ತನುಜಾ”!
ಇದು ಅಸಾಧ್ಯವನ್ನು ಸಾಧ್ಯವಾಗಿಸಿದ ಹಠದ ಛಲಗಾರ್ತಿಯ ವಿಜಯಯಾತ್ರೆ.
ಬದುಕಿನಲ್ಲಿ ಕೆಲವು ಕ್ಷಣಗಳು ನಮ್ಮ ಯಶಸ್ಸಿಗಿಂತಲೂ ಹೆಚ್ಚು ಆನಂದವನ್ನು, ನಿರಾಳತೆಯನ್ನು ತಂದುಕೊಡುತ್ತವೆ. ಅಂಥ ಒಂದು ಅಪರೂಪದ, ಭಾವನಾತ್ಮಕ ಮತ್ತು ಹೆಮ್ಮೆಯ ಕ್ಷಣಕ್ಕೆ ಇಂದು ನಾವೆಲ್ಲರೂ ಸಾಕ್ಷಿಯಾಗಿದ್ದೇವೆ.
ಐದು ವರ್ಷಗಳ ಹಿಂದೆ, ಇಡೀ ಜಗತ್ತೇ ಕೋವಿಡ್ ಮಹಾಮಾರಿಯ ಕಪಿಮುಷ್ಟಿಯಲ್ಲಿ ಸಿಲುಕಿ ತತ್ತರಿಸುತ್ತಿದ್ದಾಗ, ಭವಿಷ್ಯದ ಕನಸುಗಳನ್ನು ಕಣ್ಣಲ್ಲಿ ತುಂಬಿಕೊಂಡು ವ್ಯವಸ್ಥೆಯ ವಿರುದ್ಧ, ಸಮಯದ ವಿರುದ್ಧ ಹೋರಾಡಿದ ಒಬ್ಬ ಅಜ್ಞಾತ ಹೆಣ್ಣುಮಗಳು ಇಂದು ತನ್ನ ಹೆಸರಿನ ಮುಂದೆ ‘ಡಾಕ್ಟರ್’ ಎಂಬ ಹೆಮ್ಮೆಯ ಪದವಿಯನ್ನು ಧರಿಸಿದ್ದಾಳೆ.
ತನುಜಾ ಈಗ ಕೇವಲ ಒಬ್ಬ ಸಾಮಾನ್ಯ ಹುಡುಗಿಯಲ್ಲ, ಅವಳು ಸಮಾಜಕ್ಕೆ ಪ್ರೇರಣೆಯಾದ ‘ಡಾ. ತನುಜಾ’. ಈ ಸುದ್ಧಿ ಕೇಳಿದಾಗ ಉಂಟಾದ ಆನಂದಕ್ಕೆ ಪಾರವೇ ಇಲ್ಲ, ಎದೆಯಾಳದಿಂದ ಮೂಡಿದ ಸಮಾಧಾನಕ್ಕೆ ಮಿತಿಯೇ ಇಲ್ಲ.
ಹಿಂತಿರುಗಿ ನೋಡಿದರೆ ಐದು ವರ್ಷಗಳ ಹಿಂದಿನ ಆ ದಿನಗಳು ಕಣ್ಣಮುಂದೆ ಕಡುಗತ್ತಲೆಯಂತೆ ಬಂದು ನಿಲ್ಲುತ್ತವೆ. ದೇಶಾದ್ಯಂತ ಲಾಕ್ಡೌನ್ ಜಾರಿಯಲ್ಲಿದ್ದ ಸಮಯವದು. ಆ ಕಠಿಣ ಪರಿಸ್ಥಿತಿಯಲ್ಲಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಒಂದು ಸಣ್ಣ ಹಳ್ಳಿಯ ಬಡ ಕುಟುಂಬದ ಹೆಣ್ಣುಮಗಳು ತನುಜಾ, ತಾನು ವೈದ್ಯೆಯಾಗಬೇಕೆಂಬ ಅದಮ್ಯ ಕನಸಿನೊಂದಿಗೆ ನೀಟ್ (NEET) ಪರೀಕ್ಷೆಗೆ ಸಿದ್ಧತೆ ನಡೆಸಿದ್ದಳು. ಆದರೆ, ದುರದೃಷ್ಟವಶಾತ್ ಪರೀಕ್ಷೆಯ ಹೊತ್ತಿಗೆ ಅವಳಿಗೆ ಕೋವಿಡ್ ಕಾರಣದಿಂದ ಇಡೀ ಊರಿಗೆ ಲಾಕ್ ಡೌನ್ ಆಗಿತ್ತು. ಪರೀಕ್ಷೆ ಬರೆಯಲು ಹಾಳ್ ಟಿಕೆಟ್ ಸಿಗದ ಅಸಹಾಯಕ ಸ್ಥಿತಿ. ಅಲ್ಲಿ ತನಕ ಎರಡು ವರ್ಷಗಳ ಕಾಲ ಪರಿಶ್ರಮ ಪಟ್ಟು ಓದಿದ್ದೆಲ್ಲ ವ್ಯರ್ಥವಾಗುವ ಸ್ಥಿತಿ ನಿರ್ಮಾಣವಾಗಿತ್ತು. ಕೋವಿಡ್ ಕಾಲದಲ್ಲಿ ಇದ್ದ ಕಠಿಣ ನಿಯಮಗಳು, ಸಾರಿಗೆ ಸಂಪರ್ಕದ ಕೊರತೆ ಮತ್ತು ಸಮಯದ ಅಭಾವ ಆಕೆಯ ಕನಸನ್ನು ನುಚ್ಚುನೂರು ಮಾಡುವ ಹಂತಕ್ಕೆ ತಲುಪಿಸಿದ್ದವು.
ಒಬ್ಬ ಅಜ್ಞಾತ ಹುಡುಗಿ ತನಗೊದಗಿದ ಸಂಕಷ್ಟದಿಂದ ಕಣ್ಣೀರು ಹಾಕುತ್ತಿದ್ದಾಗ, ಆಕೆಯ ನೆರವಿಗೆ ನಿಂತಿದ್ದು ಮಾನವೀಯತೆ ಮತ್ತು ಆಕೆಯ ಅಪ್ರತಿಮ ಹಠ. ಪರೀಕ್ಷೆ ಬರೆಯಲು ಆಕೆ ಪಟ್ಟ ಶ್ರಮ, ಅನುಭವಿಸಿದ ಮಾನಸಿಕ ಯಾತನೆ ಅಷ್ಟಿಷ್ಟಲ್ಲ. ಬೆಂಗಳೂರಿನ ಪರೀಕ್ಷಾ ಕೇಂದ್ರಕ್ಕೆ ನಿಗದಿತ ಸಮಯದೊಳಗೆ ತಲುಪಬೇಕಾದ ಅನಿವಾರ್ಯತೆ ಇತ್ತು. ವ್ಯವಸ್ಥೆಯ ಕೆಂಪುಪಟ್ಟಿ ಆಡಳಿತದ ನಡುವೆ, ಸಮಯದ ವಿರುದ್ಧದ ಓಟದಲ್ಲಿ ಆಕೆ ತೋರಿದ ಧೈರ್ಯ ಸಾಮಾನ್ಯವಾದದ್ದಲ್ಲ.
ಅಂತಿಮವಾಗಿ ಆಕೆ ಪರೀಕ್ಷಾ ಕೇಂದ್ರದೊಳಗೆ ಹೆಜ್ಜೆ ಇಟ್ಟು, ಪರೀಕ್ಷೆ ಬರೆದು, ಅದ್ಭುತ ಅಂಕಗಳೊಂದಿಗೆ ಮೆಡಿಕಲ್ ಸೀಟು ಗಿಟ್ಟಿಸಿಕೊಂಡಾಗ ಇಡೀ ನಾಡೇ ಹರ್ಷಿಸಿತ್ತು.
ತನುಜಾಳ ಈ ಹೋರಾಟ ಕೇವಲ ಒಬ್ಬಳ ಹೋರಾಟವಾಗಿ ಉಳಿಯಲಿಲ್ಲ. ಆಕೆಗೆ ಪರೀಕ್ಷೆ ಬರೆಯಲು ಬೆನ್ನೆಲುಬಾಗಿ ನಿಂತು, ಕುಸಿಯುತ್ತಿದ್ದ ಆತ್ಮವಿಶ್ವಾಸವನ್ನು ಮರುಕಳಿಸುವಂತೆ ಮಾಡಿ, “ನಿನಗೆ ಒಳ್ಳೆಯದಾಗುತ್ತದೆ, ನೀನು ಪರೀಕ್ಷೆ ಬರೆಯಲೇಬೇಕು” ಎಂದು ಧೈರ್ಯ ತುಂಬಿದ ಪ್ರದೀಪ ಈಶ್ವರ್ ಅವರ ಪಾತ್ರ ಈ ಕಥೆಯಲ್ಲಿ ಅತ್ಯಂತ ಮಹತ್ವದ್ದು.
ಅಂದು ಒಬ್ಬ ಸಾಮಾನ್ಯ ಯುವಕನಾಗಿ ವಿದ್ಯಾರ್ಥಿಗಳಿಗೆ ದಾರಿದೀಪವಾಗಿದ್ದ ಅದೇ ಪ್ರದೀಪ ಈಶ್ವರ್, ಇಂದು ಜನಪ್ರಿಯ ಶಾಸಕರಾಗಿ ಸಮಾಜದ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ಕಾಲದ ಸುಂದರ ನ್ಯಾಯ.
ಈ ಅದ್ಭುತ ಜೈತ್ರಯಾತ್ರೆಯನ್ನು ನಾಡಿಗೆ ತಲುಪಿಸಬೇಕು, ಬಡತನ ಮತ್ತು ಸಂಕಷ್ಟಗಳ ನಡುವೆ ನರಳುವ ಕೋಟ್ಯಂತರ ವಿದ್ಯಾರ್ಥಿಗಳಿಗೆ ಇದೊಂದು ದಾರಿದೀಪವಾಗಬೇಕು ಎಂದು ನನ್ನ ಆತ್ಮೀಯ ಸ್ನೇಹಿತರಾದ ಎಂ.ಡಿ.ಹಳ್ಳಿ ಹರೀಶ್ ಅವರು ಶ್ರಮವಹಿಸಿ “ತನುಜಾ” ಎಂಬ ಹೆಸರಿನಲ್ಲೇ ಸಿನಿಮಾ ಮಾಡಿದರು. ಒಬ್ಬ ಪತ್ರಕರ್ತನಾಗಿ, ಸಂಪಾದಕನಾಗಿ ವ್ಯವಸ್ಥೆಯ ಗಮನ ಸೆಳೆಯುವಲ್ಲಿ ಮತ್ತು ತನುಜಾಳಿಗೆ ನ್ಯಾಯ ಒದಗಿಸುವಲ್ಲಿ ನಾನು ವಹಿಸಿದ ಪಾತ್ರವನ್ನು ಅದೇ ಸಿನಿಮಾದಲ್ಲಿ ನಾನೇ (ಸಂಪಾದಕ ವಿಶ್ವೇಶ್ವರ ಭಟ್) ಪರದೆಯ ಮೇಲೆ ಅಭಿನಯಿಸುವ ಅವಕಾಶ ಸಿಕ್ಕಿದ್ದು ನನ್ನ ಬದುಕಿನ ಅತ್ಯಂತ ಸುಂದರ ಮತ್ತು ಸಾರ್ಥಕ ನೆನಪಿನ ಬುತ್ತಿ.
ರಿಯಲ್ ಲೈಫ್ ಘಟನೆಯನ್ನು ರೀಲ್ ಲೈಫ್ನಲ್ಲಿ ಮರುಸೃಷ್ಟಿಸುವಾಗ ಅನುಭವಿಸಿದ ರೋಮಾಂಚನ ಇಂದಿಗೂ ಹಸಿರಾಗಿದೆ.
ಅಂದು ಬಿತ್ತಿದ ಛಲದ ಬೀಜ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ತನುಜಾ ವೈದ್ಯಕೀಯ ಶಿಕ್ಷಣವನ್ನು ಅತ್ಯಂತ ಯಶಸ್ವಿಯಾಗಿ ಮುಗಿಸಿ, ಎಂಬಿಬಿಎಸ್ ಪದವಿ ಪಡೆದು ಇಂದು ಅಧಿಕೃತವಾಗಿ ವೈದ್ಯೆಯಾಗಿದ್ದಾಳೆ. ಬಡತನ, ರೋಗ, ಸಾರಿಗೆ ಸಂಪರ್ಕದ ಕೊರತೆ, ನಿಯಮಗಳ ಬೇಲಿ– ಇವೆಲ್ಲವನ್ನೂ ತನ್ನ ಇಚ್ಛಾಶಕ್ತಿಯಿಂದ ಮೆಟ್ಟಿ ನಿಂತು ಈ ಸಾಧನೆ ಮಾಡಿದ್ದಾಳೆ.
ಛಲವೊಂದಿದ್ದರೆ ವಿಧಿಯ ಬರಹವನ್ನೂ ಬದಲಾಯಿಸಬಹುದು ಎಂಬುದಕ್ಕೆ ಡಾ. ತನುಜಾ ಅತ್ಯುತ್ತಮ ಉದಾಹರಣೆ.
ಈ ಯಶಸ್ಸು ಕೇವಲ ತನುಜಾ ಎಂಬ ವ್ಯಕ್ತಿಯದ್ದಲ್ಲ; ಇದು ಶ್ರಮಕ್ಕೆ ಸಿಕ್ಕ ಜಯ, ಸತ್ಯಕ್ಕೆ ಸಿಕ್ಕ ಪ್ರತಿಫಲ ಮತ್ತು ಮಾನವೀಯತೆಯ ಗೆಲುವು.
ಒಬ್ಬ ಪತ್ರಕರ್ತನಾಗಿ, ಆಕೆಯ ಹೋರಾಟವನ್ನು ಹತ್ತಿರದಿಂದ ನೋಡಿದವನಾಗಿ ನನಗೆ, ಬದುಕಿನಲ್ಲಿ ಇದಕ್ಕಿಂತ ದೊಡ್ಡ ಸಂತೋಷ, ನೆಮ್ಮದಿ ಮತ್ತು ಸಮಾಧಾನ ಇನ್ನೇನಿದೆ?
ಡಾ. ತನುಜಾ ಅವರ ಮುಂದಿನ ವೃತ್ತಿಜೀವನ ಅತ್ಯಂತ ಯಶಸ್ವಿಯಾಗಲಿ. ಬಡವರ, ನೊಂದವರ ಪಾಲಿಗೆ ಆಕೆ ಕರುಣಾಮಯಿ ಧನ್ವಂತರಿಯಾಗಲಿ. ಸಮಾಜದಲ್ಲಿ ಆಕೆ ನೂರಾರು ತನುಜಾರಿಗೆ ಸ್ಫೂರ್ತಿಯಾಗಿಲಿ ಎಂಬುದೇ ಈ ಕ್ಷಣದ ಹಾರೈಕೆ ಮತ್ತು ಹೆಮ್ಮೆ.
ನನಗೆ ಈ ಅನುಭವ ಹಿಂದೆಯೂ ಕೆಲ ಬಾರಿ ಆಗಿತ್ತು. ಮೊನ್ನೆ ಬೆಂಗಳೂರಿನಿಂದ ಲಂಡನ್ ಮಾರ್ಗವಾಗಿ ಚಿಕಾಗೋಕ್ಕೆ ಹೋಗುವಾಗ ಮತ್ತೊಮ್ಮೆ ಆಯಿತು. ಇದೊಂದು ಭೌಗೋಲಿಕ ಸ್ವಾರಸ್ಯ. ಹೇಗೆ ಅಂತ ಹೇಳುತ್ತೇನೆ ಕೇಳಿ..
ಅಂತಾರಾಷ್ಟ್ರೀಯ ವಿಮಾನ ಪ್ರಯಾಣದಲ್ಲಿ ಅನೇಕರು, ಟೇಕಾಫ್ ಆಗುತ್ತಿದ್ದಂತೆ, ಅದರಲ್ಲೂ ವಿಶೇಷವಾಗಿ ಕಿಟಕಿ ಪಕ್ಕದಲ್ಲಿ ಕುಳಿತವರು ಪರದೆ ಎಳೆದು ನಿದ್ದೆಗೆ ಜಾರುವುದು ರೂಢಿ. ಕೆಲವೊಮ್ಮೆ ಇದು ಅನಿವಾರ್ಯವೂ ಹೌದು.
ಮೊನ್ನೆ ನನಗೆ ಯಾಕೋ ಕಣ್ಣೊಳಗೆ ನಿದ್ದೆ ಇಳಿಯಲಿಲ್ಲ. ವಿಮಾನ ಲಂಡನ್ ಹೀಥ್ರೂ ನಿಲ್ದಾಣದಿಂದ ಟೇಕಾಫ್ ಆದಾಗ ಬೆಳಗಿನ ಹತ್ತು ಗಂಟೆ. ನಾನು ಸ್ಕ್ರೀನ್ ಮೇಲೆ ವಿಮಾನದ ಪಥವನ್ನು ನೋಡುತ್ತಾ, ಹೊರಗಿನ ಭೌಗೋಳಿಕ ವಿಸ್ಮಯಗಳನ್ನು ನೋಡುತ್ತಾ ಇದ್ದದ್ದೂ ನಿದ್ದೆ ಬರದಿರುವುದಕ್ಕೆ ಕಾರಣವಾಗಿತ್ತು.
ಲಂಡನ್ನ ಹೀಥ್ರೂ ವಿಮಾನ ನಿಲ್ದಾಣದಿಂದ ಅಮೆರಿಕದ ಚಿಕಾಗೋ ಓಹೇರ್ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವುದೆಂದರೆ, ಅದು ಭೂಮಿಯ ಅತ್ಯಂತ ರೋಮಾಂಚಕ ಮತ್ತು ವಿಸ್ಮಯಕಾರಿ ಭೌಗೋಳಿಕ ವಲಯಗಳ ಮೇಲಿನ ಒಂದು ಅದ್ಭುತ ಆಕಾಶಯಾನ ಎಂದು ನಾನು ಓದಿದ್ದೆ. ಸುಮಾರು ಒಂಬತ್ತೂವರೆ ಗಂಟೆಗಳ ಈ ಸುದೀರ್ಘ ಹಾರಾಟದಲ್ಲಿ, ವಿಮಾನದ ಕಿಟಕಿಯಿಂದ ಹೊರಗೆ ಕಣ್ಣುಹಾಯಿಸಿದರೆ ಪ್ರಕೃತಿಯ ವಿಭಿನ್ನ ಮುಖಗಳು ಅನಾವರಣಗೊಳ್ಳುತ್ತವೆ.
ನಕ್ಷೆಯಲ್ಲಿ ಲಂಡನ್ ಮತ್ತು ಚಿಕಾಗೋ ನಡುವೆ ಸರಳ ರೇಖೆ ಎಳೆದರೆ ಅದು ನೇರವಾಗಿ ಅಟ್ಲಾಂಟಿಕ್ ಸಾಗರವನ್ನು ದಾಟುವಂತೆ ಕಾಣುತ್ತದೆ. ಆದರೆ, ವಾಸ್ತವದಲ್ಲಿ ವಿಮಾನಗಳು ಹಾರುವ ಮಾರ್ಗ ಮತ್ತು ಅಲ್ಲಿ ಕಾಣ ಸಿಗುವ ದೃಶ್ಯಗಳೇ ಬೇರೆ.
ವಿಮಾನವು ಲಂಡನ್ನಿಂದ ಟೇಕ್-ಆಫ್ ಆದ ತಕ್ಷಣ ನೇರವಾಗಿ ಪಶ್ಚಿಮಕ್ಕೆ ಚಿಕಾಗೋದತ್ತ ಮುಖ ಮಾಡುವುದಿಲ್ಲ. ಬದಲಿಗೆ, ಅದು ವಾಯುವ್ಯ ದಿಕ್ಕಿನತ್ತ ಅಂದರೆ ಸ್ಕಾಟ್ಲ್ಯಾಂಡ್ ಮತ್ತು ಐಸ್ಲ್ಯಾಂಡ್ ಕಡೆಗೆ ಮೇಲ್ಮುಖವಾಗಿ ಸಾಗುತ್ತದೆ. ಭೂಮಿಯು ಗೋಳಾಕಾರದಲ್ಲಿರುವುದರಿಂದ, ಗೋಳದ ಮೇಲಿನ ಎರಡು ಬಿಂದುಗಳ ನಡುವಿನ ಅತ್ಯಂತ ಕಿರಿದಾದ ಮಾರ್ಗವು ನಕ್ಷೆಯಲ್ಲಿ ವಕ್ರರೇಖೆಯಾಗಿ ಕಾಣುತ್ತದೆ. ಇದನ್ನು 'ಗ್ರೇಟ್ ಸರ್ಕಲ್ ರೂಟ್' ಅಂತಾರೆ.
ಹೀಗಾಗಿ, ವಿಮಾನವು ಉತ್ತರ ಧ್ರುವದ ಹತ್ತಿರದ ಪ್ರದೇಶಗಳ ಮೂಲಕ ಹಾದುಹೋಗುತ್ತದೆ. ಇದು ಪ್ರಯಾಣದ ದೂರ ಮತ್ತು ಇಂಧನ ಎರಡನ್ನೂ ಉಳಿಸುತ್ತದೆ.
ಲಂಡನ್ ದಾಟಿ ಅಟ್ಲಾಂಟಿಕ್ ಸಾಗರದ ಮೇಲ್ಭಾಗಕ್ಕೆ ಬರುತ್ತಿದ್ದಂತೆ, 'ಬೆಂಕಿ ಮತ್ತು ಮಂಜಿನ ನಾಡು' ಎಂದೇ ಪ್ರಸಿದ್ಧವಾದ ಐಸ್ಲ್ಯಾಂಡ್ ದ್ವೀಪದ ದೃಶ್ಯಗಳು ದೂರದಿಂದ ಗೋಚರಿಸುತ್ತವೆ. ಸಾಗರದ ಮಧ್ಯದಲ್ಲಿ ಕಪ್ಪು ಬಂಡೆಗಳು ಮತ್ತು ಬಿಳಿ ಮಂಜಿನ ಹೊದಿಕೆಯಂತೆ ಕಾಣುವ ಈ ದ್ವೀಪ ಜ್ವಾಲಾಮುಖಿಗಳ ನೆಲೆ.
ಇನ್ನು ಸ್ವಲ್ಪ ಮುಂದೆ ಸಾಗುತ್ತಿದ್ದಂತೆ, ರಾತ್ರಿಯ ಹಾರಾಟವಾಗಿದ್ದರೆ ಅದೃಷ್ಟವಶಾತ್ ನಿಮಗೆ ಜಗತ್ತಿನ ವಿಸ್ಮಯಗಳಲ್ಲಿ ಒಂದಾದ 'ಅರೋರಾ ಬೋರಿಯಾಲಿಸ್' ಅಥವಾ ಉತ್ತರ ಧ್ರುವದ ಬೆಳಕಿನ ರಂಗು ಕಾಣಿಸಬಹುದು. ಹಸಿರು ಮತ್ತು ನೇರಳೆ ಬಣ್ಣದ ಬೆಳಕಿನ ಪರದೆಗಳು ಆಕಾಶದಲ್ಲಿ ನರ್ತಿಸುವಂತೆ ಕಾಣುವ ಈ ದೃಶ್ಯ ಆಕಾಶಯಾನದ ಅತ್ಯಂತ ರೋಮಾಂಚಕ ಅನುಭವ ನೀಡುತ್ತದೆ. ನಮ್ಮದು ಹಗಲಿನ ಪಯಣವಾಗಿದ್ದರಿಂದ ಆ ಅವಕಾಶ ಸಿಗಲಿಲ್ಲ.
ಈ ಇಡೀ ಪ್ರಯಾಣದ ಅತ್ಯಂತ ಪ್ರಮುಖ ಭೌಗೋಳಿಕ ಆಕರ್ಷಣೆಯೆಂದರೆ ಗ್ರೀನ್ಲ್ಯಾಂಡ್. ಜಗತ್ತಿನ ಅತಿ ದೊಡ್ಡ ದ್ವೀಪವಾದ ಗ್ರೀನ್ಲ್ಯಾಂಡ್ನ ಮೇಲಿನಿಂದ ವಿಮಾನವು ಹಾದುಹೋಗುವಾಗ ಕಿಟಕಿಯಿಂದ ಕೆಳಗೆ ನೋಡಿದರೆ ಇಡೀ ಭೂಮಿ ಕರಗಿಹೋಗಿದೆಯೇನೋ ಎಂಬ ಭ್ರಮೆ ಉಂಟಾಗುತ್ತದೆ. ಎಲ್ಲಿ ನೋಡಿದರಲ್ಲಿ ಹಿಮ ರಾಶಿ! ಸತತವಾಗಿ ನೋಡಲು ಆಗುವುದಿಲ್ಲ. ಕಣ್ಣು ಕುಕ್ಕುತ್ತದೆ.
ನೂರಾರು ಮೈಲಿಗಟ್ಟಲೆ ವಿಸ್ತರಿಸಿರುವ ಬಿಳಿ ಮಂಜಿನ ದೈತ್ಯ ಸಾಮ್ರಾಜ್ಯ, ಸಾಗರಕ್ಕೆ ಬಂದು ಸೇರುವ ಹಿಮನದಿಗಳು ಮತ್ತು ಸಾಗರದ ನೀಲಿ ನೀರಿನಲ್ಲಿ ತೇಲುವ ಸಾವಿರಾರು ಮಂಜುಗಡ್ಡೆಯ ಗುಡ್ಡಗಳು ಕಾಣಸಿಗುತ್ತವೆ. ಈ ಬಿಳಿ ಮತ್ತು ನೀಲಿ ಬಣ್ಣದ ಅದ್ಭುತ ಸಮ್ಮಿಲನವು ಪ್ರಕೃತಿಯ ನೈಜ ಶಕ್ತಿಯನ್ನು ಕಣ್ಣಿಗೆ ಕಟ್ಟುತ್ತದೆ. ಪೈಲಟ್ ಗೆ ಇದನ್ನು ಪ್ರಯಾಣಿಕರಿಗೆ ತಿಳಿಸಬೇಕೆಂಬ ತವಕ. “ಕೆಳಗೆ ದಿಟ್ಟಿಸಿ, ಇಲ್ಲಿಂದಲೇ ಉಚಿತವಾಗಿ ಗ್ರೀನ್ ಲ್ಯಾಂಡ್ ನೋಡಬಹುದು” ಎಂದು ಅನೌನ್ಸ್ ಮಾಡಿದ. ವಿಮಾನದಿಂದ ಇದನ್ನು ನೋಡುವುದು ಒಂದು ಹಬ್ಬ!
ಗ್ರೀನ್ಲ್ಯಾಂಡ್ ದಾಟಿದ ನಂತರ ವಿಮಾನವು ಕೆನಡಾದ ಉತ್ತರ ಭಾಗವನ್ನು (ನುನಾವುಟ್ ಮತ್ತು ತದನಂತರ ಒಂಟಾರಿಯೊ ಪ್ರಾಂತ್ಯ) ಪ್ರವೇಶಿಸುತ್ತದೆ. ಇಲ್ಲಿನ ಭೂಗೋಳ ತೀರಾ ವಿಭಿನ್ನ. ಬೇಸಿಗೆಯಲ್ಲಾದರೆ, ಕರಗಿದ ಮಂಜಿನಿಂದಾಗಿ ಭೂಮಿಯ ಮೇಲೆ ಲಕ್ಷಾಂತರ ಸಣ್ಣ-ದೊಡ್ಡ ಸರೋವರಗಳು ಚದುರಿದಂತೆ ಕಾಣುತ್ತವೆ. ವಿಮಾನದಿಂದ ನೋಡಿದಾಗ ಇಡೀ ಕೆನಡಾದ ಭೂಭಾಗವು ಒಂದು ದೈತ್ಯ 'ಮೊಸಾಯಿಕ್ ಪಜಲ್'ನಂತೆ ಅಥವಾ ಹನಿಗಳು ಬಿದ್ದ ಕನ್ನಡಿಯಂತೆ ಗೋಚರಿಸುತ್ತದೆ. ಚಳಿಗಾಲದಲ್ಲಾದರೆ ಈ ಇಡೀ ಪ್ರದೇಶ ಬಿಳಿ ಮರುಭೂಮಿಯಂತೆ ಸ್ತಬ್ಧವಾಗಿರುತ್ತದೆ.
ಪ್ರಯಾಣದ ಕೊನೆಯ ಹಂತದಲ್ಲಿ ವಿಮಾನವು ಅಮೆರಿಕದ ಗಡಿಯನ್ನು ಪ್ರವೇಶಿಸುತ್ತಿದ್ದಂತೆ ಜಗತ್ತಿನ ಅತಿ ದೊಡ್ಡ ಸಿಹಿನೀರಿನ ಸರೋವರಗಳ ಸಮೂಹವಾದ 'ಗ್ರೇಟ್ ಲೇಕ್ಸ್' ವಲಯವನ್ನು ತಲುಪುತ್ತದೆ. ಚಿಕಾಗೋ ನಗರವು 'ಮಿಚಿಗನ್ ಸರೋವರದ' ದಡದಲ್ಲಿದೆ.
ವಿಮಾನವು ಲ್ಯಾಂಡಿಂಗ್ ಮಾಡಲು ಕೆಳಗಿಳಿಯುವಾಗ ಮಿಚಿಗನ್ ಸರೋವರವು ಎಷ್ಟು ವಿಶಾಲವಾಗಿ ಕಾಣುತ್ತದೆ ಎಂದರೆ, ಅದು ಸರೋವರವಲ್ಲ ಬದಲಿಗೆ ಒಂದು ದೊಡ್ಡ ಸಮುದ್ರವೇ ಇರಬೇಕು ಎಂಬಂತೆ ಭಾಸವಾಗುತ್ತದೆ. ಈ ನೀಲಿ ಸರೋವರದ ತಟದಲ್ಲೇ ಚಿಕಾಗೋ ನಗರದ ಬೃಹತ್ ಗಗನಚುಂಬಿ ಕಟ್ಟಡಗಳು ಸಾಲಾಗಿ ನಿಂತಿರುವುದು ಕಾಣುತ್ತದೆ. (ಸರೋವರದ ತಣ್ಣನೆಯ ಗಾಳಿಯಿಂದಾಗಿ ಚಿಕಾಗೋ ನಗರಕ್ಕೆ 'ವಿಂಡಿ ಸಿಟಿ' ಎಂಬ ಹೆಸರೂ ಬಂದಿದೆ.)
ಲಂಡನ್ನಿಂದ ಚಿಕಾಗೋವರೆಗಿನ ಈ ಪ್ರಯಾಣವು ಕೇವಲ ಸಮಯದ ವ್ಯತ್ಯಾಸವನ್ನಷ್ಟೇ ಅಲ್ಲ (ಆರು ಗಂಟೆಗಳ ಕಾಲದ ವ್ಯತ್ಯಾಸ), ಭೂಮಿಯ ಭೌಗೋಳಿಕ ವೈವಿಧ್ಯವನ್ನೂ ಕಣ್ಣಮುಂದೆ ತರುತ್ತದೆ.
ಜಗತ್ತನ್ನು ಸುತ್ತುವುದೆಂದರೆ ಕೇವಲ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಭೌತಿಕವಾಗಿ ಚಲಿಸುವುದಷ್ಟೇ ಅಲ್ಲ, ಅದು ಹೊಸ ಸಂಸ್ಕೃತಿ, ಇತಿಹಾಸ, ಭಾಷೆ ಮತ್ತು ಮನುಷ್ಯರ ಒಳಗಣ್ಣನ್ನು ತೆರೆಸುವ ಒಂದು ಅದ್ಭುತ ಅನುಭವ. ಇದೇ ಆಶಯದೊಂದಿಗೆ ಮೂಡಿಬರುತ್ತಿರುವ ಅಂಕಣವೇ—“ತಿರುಗಿ ಕೆಟ್ಟವರಿಲ್ಲವೋ”.
ಪ್ರತಿ ವಾರ ನಿಮ್ಮ ಕೈಹಿಡಿದು ಜಗತ್ತಿನ ಯಾವುದೋ ಒಂದು ಅಪರೂಪದ ಮೂಲೆಗೆ ಕರೆದೊಯ್ಯುವ, ಅಲ್ಲಿನ ವಿಶಿಷ್ಟ ಸಂಗತಿಗಳನ್ನು ನಿಮ್ಮೆದುರು ಬಿಚ್ಚಿಡುವ ಪ್ರಯತ್ನ ನನ್ನದು.
ಪ್ರವಾಸ ಎನ್ನುವುದು ಕೇವಲ ಪ್ರೇಕ್ಷಣೀಯ ಸ್ಥಳಗಳನ್ನು ನೋಡಿ, ಕೆಮರಾದಲ್ಲಿ ಚಿತ್ರಗಳನ್ನು ಸೆರೆಹಿಡಿಯುವುದಕ್ಕೆ ಸೀಮಿತವಲ್ಲ. ನಿಜವಾದ ಪ್ರವಾಸದ ಮಜಾ ಇರುವುದು ಅಲ್ಲಿನ ಸಣ್ಣಪುಟ್ಟ ಕುತೂಹಲಗಳಲ್ಲಿ, ನಾವೆಂದೂ ಕೇಳಿರದ ವಿಚಿತ್ರ ಆಚರಣೆಗಳಲ್ಲಿ ಮತ್ತು ಇತಿಹಾಸದ ಪುಟಗಳು ಮರೆತ ರೋಮಾಂಚಕ ಕಥೆಗಳಲ್ಲಿ. ಜಗತ್ತಿನ ಅತ್ಯಾಧುನಿಕ ಗಗನಚುಂಬಿ ಕಟ್ಟಡಗಳ ಮಹಾನಗರಗಳಿಂದ ಹಿಡಿದು, ಪ್ರಕೃತಿಯ ಮಡಿಲಿನಲ್ಲಿ ಅಡಗಿರುವ ಶಾಂತ ಹಾಗೂ ನಿಗೂಢ ದೇಶಗಳವರೆಗೆ ಪ್ರತಿಯೊಂದು ತಾಣಕ್ಕೂ ತನ್ನದೇ ಆದ ವಿಶಿಷ್ಟ ವ್ಯಕ್ತಿತ್ವವಿರುತ್ತದೆ.
ಉದಾಹರಣೆಗೆ, ವಿಶ್ವದ ಅತ್ಯಂತ ಸಂತೋಷದಾಯಕ ದೇಶದ ವಿಮಾನ ನಿಲ್ದಾಣದ ಪುಸ್ತಕದಂಗಡಿಯಲ್ಲಿ ಸಿಗುವ ಸಾಹಿತ್ಯದ ಘಮಲು, ಯುರೋಪಿನ ಐತಿಹಾಸಿಕ ಚಾಕೊಲೇಟ್ ಮ್ಯೂಸಿಯಂನ ಸಿಹಿ ಅನುಭವ, ಅಥವಾ ಆಫ್ರಿಕಾದ ವನ್ಯಮೃಗಗಳ ನಾಡಿನ ಸಾಹಸಮಯ ಕ್ಷಣಗಳು—ಹೀಗೆ ಪ್ರತಿಯೊಂದು ಪ್ರಯಾಣವೂ ಹೊಸದೊಂದು ದೃಷ್ಟಿಕೋನವನ್ನು ನೀಡುತ್ತದೆ.
ಈ ಅಂಕಣದ ಮೂಲಕ ನಾನು ಕಂಡ, ಅನುಭವಿಸಿದ ಜಗತ್ತಿನ ಅತ್ಯಂತ ಸ್ವಾರಸ್ಯಕರ ಮತ್ತು ಕುತೂಹಲಕಾರಿ ಸಂಗತಿಗಳನ್ನು ಹೆಕ್ಕಿ ನಿಮ್ಮ ಮುಂದಿಡುತ್ತೇನೆ. ವಿಮಾನ ಯಾನದ ತಾಂತ್ರಿಕ ಕೌತುಕಗಳು, ವಿಭಿನ್ನ ದೇಶಗಳ ಆಡಳಿತ ವೈಖರಿ, ಅಲ್ಲಿನ ಜನರ ಜೀವನಶೈಲಿ ಹಾಗೂ ಭಾರತೀಯರಾದ ನಾವೆಲ್ಲರೂ ಆ ಜಾಗತಿಕ ಸನ್ನಿವೇಶಗಳಿಂದ ಕಲಿಯಬಹುದಾದ ಪಾಠಗಳು ಈ ಬರಹಗಳ ಮುಖ್ಯ ತಿರುಳು.
ಕೇವಲ ಪ್ರವಾಸಿ ತಾಣಗಳ ಪರಿಚಯದ ಬದಲು, ಆಯಾ ದೇಶಗಳ ಆತ್ಮವನ್ನು ಸ್ಪರ್ಶಿಸುವ, ಓದುಗರಲ್ಲಿ ಜ್ಞಾನ ಮತ್ತು ಜಿಜ್ಞಾಸೆಯನ್ನು ಮೂಡಿಸುವ ಪ್ರಯತ್ನ ಇಲ್ಲಿದೆ.
ಪ್ರಯಾಣದ ನಿಜವಾದ ಸುಖ ಇರುವುದು ತಲುಪಬೇಕಾದ ಕೊನೆಯ ನಿಲ್ದಾಣದಲ್ಲಲ್ಲ, ಬದಲಿಗೆ ಆ ನಿಲ್ದಾಣವನ್ನು ತಲುಪಲು ನಾವು ಕ್ರಮಿಸುವ ಹಾದಿಯಲ್ಲಿ ಹಾಗೂ ಸಿಗುವ ಅನುಭವಗಳಲ್ಲಿ. ಈ ಅಂಕಣ ನಿಮ್ಮ ಜ್ಞಾನದ ಹಸಿವನ್ನು ನೀಗಿಸುವುದರ ಜೊತೆಗೆ, ನಿಮ್ಮಲ್ಲೂ ಜಗತ್ತನ್ನು ನೋಡುವ ಹೊಸದೊಂದು ಹಂಬಲವನ್ನು ಹುಟ್ಟುಹಾಕುತ್ತದೆ ಎಂಬ ನಂಬಿಕೆ ನನ್ನದು.
ಪ್ರತಿಯೊಂದು ದೇಶಕ್ಕೂ ತನ್ನದೇ ಆದ ವಿಶಿಷ್ಟವಾದ 'ಸ್ಥಳೀಯ ಹೆಮ್ಮೆ’ಯ ಸಂಗತಿಗಳಿರುತ್ತವೆ. ಕೆಲವು ದೇಶಗಳು ತಂತ್ರಜ್ಞಾನದ ತುತ್ತತುದಿಯಲ್ಲಿದ್ದರೆ, ಇನ್ನು ಕೆಲವು ದೇಶಗಳು ಕಾರ್ಬನ್ ನೆಗಟಿವ್ ಆಗಿ ಉಳಿದು ಪ್ರಕೃತಿಯನ್ನು ಆರಾಧಿಸುತ್ತವೆ. ಇಂಥ ವೈವಿಧ್ಯಗಳನ್ನು ಹತ್ತಿರದಿಂದ ನೋಡುವುದೆಂದರೆ, ಜಗತ್ತಿನ ಬಹುಮುಖಿ ಸಂಸ್ಕೃತಿಯನ್ನು ಅರ್ಥಮಾಡಿಕೊಂಡಂತೆ. ಈ ಅಂಕಣದ ಮೂಲ ಉದ್ದೇಶವೇ ಅದು—ಕೇವಲ ಭೌಗೋಳಿಕ ದೂರವನ್ನು ಕ್ರಮಿಸುವುದಲ್ಲ, ಬದಲಿಗೆ ಆಯಾ ದೇಶಗಳ ವಿಭಿನ್ನ ಆಲೋಚನಾ ಲಹರಿಗಳನ್ನು ನಮ್ಮದಾಗಿಸಿಕೊಳ್ಳುವುದು.
ಪ್ರತಿಯೊಂದು ವಿದೇಶಿ ಪ್ರವಾಸವೂ ನನಗೆ ಕೇವಲ ನೆನಪುಗಳನ್ನು ಮಾತ್ರ ನೀಡಿಲ್ಲ, ಬದಲಿಗೆ ಒಬ್ಬ ಬರಹಗಾರನಾಗಿ ನನ್ನ ದೃಷ್ಟಿಕೋನವನ್ನು ವಿಸ್ತರಿಸಿದೆ. ಅಲ್ಲಿನ ಸ್ಥಳೀಯ ಮಾರುಕಟ್ಟೆಗಳಲ್ಲಿ ಸಿಗುವ ಅಪರೂಪದ ವಸ್ತುಗಳು, ಗ್ರಂಥಾಲಯಗಳು, ವಿಮಾನಯಾನ ಸಂಸ್ಥೆಗಳ ಕಾರ್ಯವೈಖರಿ ಮತ್ತು ಭಾಷೆಯ ಗಡಿಗಳನ್ನು ಮೀರಿ ನಿಲ್ಲುವ ಮನುಷ್ಯ ಸಹಜ ಪ್ರೀತಿ—ಇವೆಲ್ಲವೂ ನನ್ನ ಅಂಕಣದ ಜೀವತುಂಬುವ ಕಥೆಗಳಾಗಿವೆ.
ಅಮೆರಿಕ ಪಯಣದ ದಣಿವು ಇನ್ನೂ ಕಣ್ಣಲ್ಲಿರುವಾಗಲೇ, ಮತ್ತೆ ಹೊರಟೆ!
ನಿಜ, ಬದುಕು ಕರೆದುಕೊಂಡು ಹೋದಲ್ಲೆಲ್ಲ ಹೋಗಲೇಬೇಕು. ಈ ಮಾತು ಕೇಳಲು ಎಷ್ಟು ಸರಳವಾಗಿದೆಯೋ, ಬದುಕಿನ ನೈಜ ಅನುಭವಕ್ಕೆ ಇಳಿದಾಗ ಅಷ್ಟೇ ರೋಮಾಂಚನಕಾರಿಯಾಗಿರುತ್ತದೆ. ನಾವು ಏನೇ ಯೋಜನೆಗಳನ್ನು ಹಾಕಿಕೊಂಡರೂ, ಜೀವನ ತನ್ನದೇ ಆದ ಕೆಲವು ಅನಿರೀಕ್ಷಿತ ತಿರುವುಗಳನ್ನು ನಮ್ಮ ಮುಂದೆ ತಂದಿಡುತ್ತದೆ. ಆ ತಿರುವುಗಳನ್ನು ಪ್ರೀತಿಯಿಂದ ಸ್ವೀಕರಿಸಿ, ಬದುಕು ತೋರಿಸಿದ ಹಾದಿಯಲ್ಲಿ ಸಾಗುವುದರಲ್ಲೇ ನಿಜವಾದ ಸೌಂದರ್ಯ, ಮಜಾ ಇದೆ.
ಅಮೆರಿಕದಿಂದ ಭಾರತಕ್ಕೆ ಮರಳಿ ಇನ್ನೂ ಎರಡು ದಿನಗಳು ಕಳೆದಿರಲಿಲ್ಲ. ಪ್ರಯಾಣದ ಆಯಾಸ (Jet lag), ದೇಹದ ಜೈವಿಕ ಗಡಿಯಾರದ ಏರುಪೇರು, ಬದಲಾದ ವಾತಾವರಣಕ್ಕೆ ಹೊಂದಿಕೊಳ್ಳುವ ಮೊದಲೇ ಮತ್ತೊಂದು ಸುದೀರ್ಘ ಪ್ರಯಾಣ ಕರೆಯುತ್ತಿದೆ.
ಬೆಳಗ್ಗೆ ಬೆಳಗ್ಗೆ ಗುವಾಹಟಿಗೆ ಹೊರಟು, ಮುಂದೆ ಮೇಘಾಲಯಕ್ಕೆ ಪಯಣ.
ಅಮೆರಿಕದ ಚಿಕಾಗೋ ನಗರದ ಗಗನಚುಂಬಿ ಕಟ್ಟಡಗಳು, ಶಿಸ್ತುಬದ್ಧ ರಸ್ತೆಗಳು ಮತ್ತು ಸದಾ ಓಡುತ್ತಿರುವ ಯಾಂತ್ರಿಕ ಜೀವನದಿಂದ ದಿಢೀರನೆ ಬಂದು ಇಳಿದಾಗ ಭಾರತದ ಮಣ್ಣಿನ ವಾಸನೆ ಆತ್ಮೀಯತೆ ನೀಡುತ್ತದೆ. ಆದರೆ, ವಿಶ್ರಾಂತಿ ಪಡೆಯುವ ಮೊದಲೇ ಬ್ಯಾಗ್ ಪ್ಯಾಕ್ ಮಾಡಿ ಮೇಘಾಲಯದತ್ತ ಹೊರಡುವುದು ತುಸು ಕಷ್ಟವಾದರೂ, ಪಯಣದ ಸುಖವೇ ಬೇರೆ.
ಪ್ರಯಾಣವು ಕೇವಲ ಭೌಗೋಳಿಕ ಬದಲಾವಣೆಯಲ್ಲ, ಇದು ಎರಡು ಭಿನ್ನ ಜಗತ್ತುಗಳ ನಡುವಿನ ಸೇತುವೆ. ಅಮೆರಿಕದ ಕೃತಕ ಬೆಳಕಿನ ಜಗತ್ತಿನಿಂದ ನೇರವಾಗಿ ಪ್ರಕೃತಿಯು ತಾನೇ ಸ್ವತಃ ಕೈಯಾರೆ ಕೆತ್ತಿದ ಮೇಘಾಲಯದ ಹಸಿರು ಕಣಿವೆಗಳತ್ತ ಸಾಗುವುದು ಒಂದು ಅದ್ಭುತ ಅನುಭವ.
'ಮೇಘಾಲಯ' ಎಂದರೆ ಹೆಸರೇ ಸೂಚಿಸುವಂತೆ ಮೋಡಗಳ ಮನೆ. ಅಮೆರಿಕದ ವಿಮಾನ ನಿಲ್ದಾಣಗಳ ಭದ್ರತಾ ತಪಾಸಣೆ, ತಾಂತ್ರಿಕ ವಾತಾವರಣದಿಂದ ಹೊರಬಂದು ಮೇಘಾಲಯದ ರಾಜಧಾನಿ ಶಿಲಾಂಗ್ ನ ತಂಪು ಮತ್ತು ಮಣ್ಣಿನ ಸುವಾಸನೆ ಇಡೀ ದೇಹದ ಆಯಾಸವನ್ನು ಮರೆಸುವುದು ಸುಳ್ಳಲ್ಲ.
ಅಮೆರಿಕದಿಂದ ಬಂದು ತಕ್ಷಣ ಮೇಘಾಲಯಕ್ಕೆ ಹೊರಟಾಗ ಆರಂಭದಲ್ಲಿ ದೈಹಿಕವಾಗಿ ದಣಿವು ಎನಿಸಿದರೂ, ಮನಸ್ಸು ಮಾತ್ರ ಹೊಸ ಉತ್ಸಾಹಕ್ಕೆ ಅಣಿಯಾಗುತ್ತಿದೆ.
ಅಮೆರಿಕದ ಭರಾಟೆಯ ದಿನಗಳಿಂದ ಮೇಘಾಲಯದ ಮಂಜಿನ ಹನಿಗಳವರೆಗಿನ ಈ ಪಯಣ ಬದುಕಿನ ಅನಿರೀಕ್ಷಿತ ಉಡುಗೊರೆ. ನಿಯಂತ್ರಣಗಳನ್ನು ಬಿಟ್ಟು, ಬದುಕಿನ ಹರಿವಿಗೆ ನಮ್ಮನ್ನು ನಾವು ಒಪ್ಪಿಸಿಕೊಂಡಾಗ ಮಾತ್ರ ಇಂತಹ ಅದ್ಭುತ ಕ್ಷಣಗಳು ನಮ್ಮದಾಗುತ್ತವೆ.
ಹೌದು, ಬದುಕು ಕರೆದ ಕಡೆಗೆ ಹೆಜ್ಜೆ ಇಡುತ್ತಾ ಸಾಗಬೇಕು. ಏಕೆಂದರೆ ಬದುಕು ಎಂದಿಗೂ ತಪ್ಪು ದಾರಿಯನ್ನು ತೋರಿಸುವುದಿಲ್ಲ; ಪ್ರತಿ ಹಾದಿಯಲ್ಲೂ ಒಂದೊಂದು ಹೊಸ ಪಾಠ ಮತ್ತು ನೆನಪನ್ನು ಕಾಯ್ದಿಟ್ಟಿರುತ್ತದೆ.
ವಿಮಾನ ಪ್ರಯಾಣ ಎನ್ನುವುದು ಕೇವಲ ಎರಡು ದೇಶಗಳ ನಡುವಿನ ಅಂತರವನ್ನು ಕ್ರಮಿಸುವುದಲ್ಲ; ಅದು ಕಾಲದ ಚಕ್ರದೊಂದಿಗೆ ಆಟವಾಡುವ ಒಂದು ಅದ್ಭುತ ಮತ್ತು ದಣಿವರಿಯದ ಅನುಭವ. ಅದರಲ್ಲೂ ಅಮೆರಿಕದ ಚಿಕಾಗೋದಿಂದ ಹೊರಟು, ಬ್ರಿಟನ್ನಿನ ಲಂಡನ್ ಮಾರ್ಗವಾಗಿ ಭಾರತದ ಸಿಲಿಕಾನ್ ಸಿಟಿ ಬೆಂಗಳೂರಿಗೆ ಬರುವುದೆಂದರೆ ಅದು ಬರೋಬ್ಬರಿ ಅರ್ಧ ಪ್ರಪಂಚವನ್ನು ಸೀಳಿ ಬಂದಂತೆ.
ಈ ಸುದೀರ್ಘ ಪಯಣದಲ್ಲಿ ಕ್ಷಣ ಕ್ಷಣವೂ ಟೈಮ್ ಜೋನ್ ಬದಲಾಗುತ್ತಿದ್ದರೆ, ನಮ್ಮ ದೇಹದ ಒಳಗಿರುವ ಜೈವಿಕ ಗಡಿಯಾರ (Circadian Rhythm) ಒಡೆದು ಹೋದಂತೆ ಭಾಸವಾಗುತ್ತದೆ. ಇದು ಊಟ, ನಿದ್ದೆ, ಹಗಲು, ರಾತ್ರಿ ಎಲ್ಲವೂ ತಲೆಕೆಳಗಾಗುವ ರೋಮಾಂಚಕ ಹಾಗೂ ದಣಿವಿನ ಪ್ರಯಾಣ.
ಪ್ರಯಾಣದ ಆರಂಭವಾಗುವುದು ಚಿಕಾಗೋದ ಒಹೇರ್ (O'Hare) ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ. ಚಿಕಾಗೋ ಇರುವುದು ಸೆಂಟ್ರಲ್ ಸ್ಟ್ಯಾಂಡರ್ಡ್ ಟೈಮ್ (CST) ವಲಯದಲ್ಲಿ. ನೀವು ವಿಮಾನ ಏರುವಾಗ ಅಲ್ಲಿ ಮಧ್ಯಾಹ್ನವಾಗಿರಬಹುದು. ಆದರೆ, ಮನಸ್ಸಿನಲ್ಲಿ ಈಗಾಗಲೇ ಮುಂದಿನ ನಿಲ್ದಾಣಗಳ ಸಮಯದ ಲೆಕ್ಕಾಚಾರ ಶುರುವಾಗಿರುತ್ತದೆ.
ವಿಮಾನವು ರನ್ವೇಯಿಂದ ಮೇಲಕ್ಕೆ ಜಿಗಿಯುತ್ತಿದ್ದಂತೆ, ನಾವು ಕೇವಲ ಭೌಗೋಳಿಕ ಗಡಿಗಳನ್ನು ದಾಟುತ್ತಿಲ್ಲ, ಬದಲಿಗೆ ಕಾಲದ ವೇಗವನ್ನು ಮೀರಿಸಲು ಹೊರಟಿದ್ದೇವೆ ಎಂಬ ಸತ್ಯದ ಅರಿವಾಗುತ್ತದೆ.
ಕಿಟಕಿಯ ಹೊರಗೆ ಇಣುಕಿದರೆ ಅಟ್ಲಾಂಟಿಕ್ ಮಹಾಸಾಗರದ ಅಗಾಧತೆ ಕಾಣಿಸುತ್ತದೆ. ಆದರೆ, ವಿಮಾನದ ಒಳಗಿನ ಪರದೆಯ ಮೇಲೆ ಸಮಯದ ಮುಳ್ಳುಗಳು ವೇಗವಾಗಿ ಓಡುತ್ತಿರುತ್ತವೆ. ನಾವು ಚಿಕಾಗೋದಲ್ಲಿ ಮಧ್ಯಾಹ್ನದ ಊಟ ಮುಗಿಸಿ ಕೆಲವೇ ಗಂಟೆಗಳಾಗಿರುತ್ತದಷ್ಟೆ, ಅಷ್ಟರಲ್ಲೇ ವಿಮಾನದ ಸಿಬ್ಬಂದಿ ರಾತ್ರಿಯ ಊಟದ ತಟ್ಟೆಯನ್ನು ನಮ್ಮ ಮುಂದಿಡುತ್ತಾರೆ. "ಈಗಲೇ ರಾತ್ರಿಯೇ?" ಎಂದು ನಮ್ಮ ಹೊಟ್ಟೆ ಮತ್ತು ಮಿದುಳು ಪರಸ್ಪರ ಪ್ರಶ್ನೆ ಮಾಡಿಕೊಳ್ಳುವ ಮೊದಲೇ ಕಿಟಕಿಯ ಹೊರಗೆ ಕತ್ತಲು ಆವರಿಸಿರುತ್ತದೆ.
ಅಟ್ಲಾಂಟಿಕ್ ಸಾಗರವನ್ನು ದಾಟಿ ವಿಮಾನವು ಲಂಡನ್ನ ಹೀಥ್ರೂ ನಿಲ್ದಾಣದಲ್ಲಿ ಇಳಿಯುವಾಗ ಚಿಕಾಗೋಗಿಂತ ಐದು ಅಥವಾ ಆರು ಗಂಟೆಗಳ ಕಾಲ ಮುಂದೆ ಸಾಗಿರುತ್ತೇವೆ (GMT/BST). ಚಿಕಾಗೋದ ಲೆಕ್ಕದಲ್ಲಿ ಅದು ನಡುರಾತ್ರಿಯ ನಿದ್ದೆಯ ಸಮಯ. ಆದರೆ ಲಂಡನ್ನಲ್ಲಿ ಆಗ ತಾನೇ ಸೂರ್ಯ ಮೂಡಿರುತ್ತಾನೆ!
ಲಂಡನ್ ವಿಮಾನ ನಿಲ್ದಾಣದ ಟರ್ಮಿನಲ್ಗಳ ನಡುವೆ ನಡೆಯುವಾಗ ದೇಹವು ವಿಚಿತ್ರವಾಗಿ ವರ್ತಿಸಲು ಶುರು ಮಾಡುತ್ತದೆ. ಕಣ್ಣುಗಳು ನಿದ್ದೆಗಾಗಿ ಹಪಹಪಿಸುತ್ತಿದ್ದರೆ, ಸುತ್ತಲಿನ ಜಗತ್ತು ಮಾತ್ರ ಕಚೇರಿಗೆ ಓಡುವ ಗಡಿಬಿಡಿಯಲ್ಲಿರುತ್ತದೆ.
ಕಾಫಿ ಶಾಪ್ಗಳ ಮುಂದೆ ನಿಂತು ಬಿಸಿಬಿಸಿ ಕಾಫಿ ಕುಡಿಯುತ್ತಿರುವಾಗ, ಇದು ಬೆಳಗಿನ ಉಪಾಹಾರದ ಸಮಯವೋ ಅಥವಾ ರಾತ್ರಿಯ ಕಾಫಿ ವಿರಾಮವೋ ಎಂಬ ಗೊಂದಲ ಮೂಡುತ್ತದೆ. ಟೈಮ್ ಜೋನ್ಗಳ ಈ ಜಿಗಿತದಲ್ಲಿ ದೇಹದ ಜೈವಿಕ ಗಡಿಯಾರ ಸಂಪೂರ್ಣವಾಗಿ ಗೊಂದಲಕ್ಕೀಡಾಗುತ್ತದೆ. ಲಂಡನ್ನಲ್ಲಿ ಕಳೆಯುವ ಆ ಕೆಲವು ಗಂಟೆಗಳು ಹಗಲೋ-ರಾತ್ರಿಯೋ ತಿಳಿಯದ ಒಂದು ಮಾಯಾಲೋಕದಂತೆ ಭಾಸವಾಗುತ್ತದೆ.
ಲಂಡನ್ನಿಂದ ಬೆಂಗಳೂರಿಗೆ ಹೊರಡುವ ಮುಂದಿನ ವಿಮಾನವನ್ನು ಏರಿದಾಗ ಪ್ರಯಾಣದ ಎರಡನೇ ಹಂತ ಆರಂಭವಾಗುತ್ತದೆ. ಈಗ ಕಾಲದ ಚಕ್ರ ಮತ್ತಷ್ಟು ವೇಗವಾಗಿ ತಿರುಗುತ್ತದೆ. ಬ್ರಿಟನ್ ಮತ್ತು ಭಾರತದ ನಡುವೆ ಐದೂವರೆ ಗಂಟೆಗಳ ವ್ಯತ್ಯಾಸವಿದೆ. ವಿಮಾನವು ಯುರೋಪ್ ಮತ್ತು ಮಧ್ಯಪ್ರಾಚ್ಯದ ಆಕಾಶದಲ್ಲಿ ಹಾರುತ್ತಿರುವಾಗ, ಕಿಟಕಿಯ ಹೊರಗೆ ಹಗಲು ಮತ್ತು ರಾತ್ರಿಗಳು ಕಣ್ಣಾಮುಚ್ಚಾಲೆ ಆಡುತ್ತವೆ.
ವಿಮಾನದ ಪರದೆಯ ಮೇಲೆ 'ಲೋಕಲ್ ಟೈಮ್' ಬದಲಾಗುತ್ತಿರುವುದನ್ನು ನೋಡುವುದೇ ಒಂದು ವಿಶಿಷ್ಟ ಅನುಭವ. ನಾವು ಕುಳಿತಲ್ಲೇ ಗಂಟೆಗಳು ಕಳೆದುಹೋಗುತ್ತವೆ. ನಿದ್ದೆ ಮಾಡಲು ಕಣ್ಣು ಮುಚ್ಚುತ್ತೀರಿ, ಆದರೆ ಎರಡು ಗಂಟೆಗಳಲ್ಲಿ ಮತ್ತೆ ಬೆಳಕಾಗುತ್ತದೆ. ದೇಹಕ್ಕೆ ವಿಶ್ರಾಂತಿ ಬೇಕೆನಿಸಿದಾಗ ಆಕಾಶದಲ್ಲಿ ಸೂರ್ಯ ಉದಯಿಸಿರುತ್ತಾನೆ. ಹಸಿವಾದಾಗ ಊಟದ ಸಮಯ ದಾಟಿ ಹೋಗಿರುತ್ತದೆ.
ವಿಮಾನದ ಸಿಬ್ಬಂದಿ ನೀಡುವ ಆಹಾರದ ಕ್ರಮವೂ ಅಸ್ತವ್ಯಸ್ತವಾಗುತ್ತದೆ. ಲಂಡನ್ ಕಾಲಮಾನದ ಪ್ರಕಾರ ಮಧ್ಯಾಹ್ನದ ಊಟವನ್ನು ಜೀರ್ಣಿಸಿಕೊಳ್ಳುವ ಮೊದಲೇ, ಭಾರತದ ಕಾಲಮಾನಕ್ಕೆ ಹೊಂದಿಕೊಳ್ಳುವಂತೆ ರಾತ್ರಿಯ ಭೋಜನವನ್ನು ನೀಡಲಾಗುತ್ತದೆ. ಜೀರ್ಣಾಂಗ ವ್ಯವಸ್ಥೆಯು ಈ ಹಠಾತ್ ಬದಲಾವಣೆಗೆ ಒಗ್ಗಿಕೊಳ್ಳಲು ಹೆಣಗಾಡುತ್ತದೆ.
ಈ ಇಡೀ ಪ್ರಯಾಣದಲ್ಲಿ ನಮ್ಮನ್ನು ಕಾಡುವ ಅತಿ ದೊಡ್ಡ ಆತಿಥೇಯ ಎಂದರೆ 'ಜೆಟ್ ಲ್ಯಾಗ್'. ಚಿಕಾಗೋದಿಂದ ಬೆಂಗಳೂರಿಗೆ ಬರುವಾಗ ಒಟ್ಟು ಸಮಯದ ವ್ಯತ್ಯಾಸ ಸುಮಾರು 11.5 ಗಂಟೆಗಳು! ಅಂದರೆ, ಚಿಕಾಗೋದಲ್ಲಿ ಹಗಲಾದರೆ ಬೆಂಗಳೂರಿನಲ್ಲಿ ರಾತ್ರಿ.
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾಲಿಟ್ಟಾಗ, ಅಲ್ಲಿನ ಹಿತಕರವಾದ ಗಾಳಿ ನಮ್ಮನ್ನು ಸ್ವಾಗತಿಸುತ್ತದೆ. ಹಸಿರು ಮತ್ತು ಆಧುನಿಕತೆಯ ಸಮ್ಮಿಲನದ ಈ ನಿಲ್ದಾಣದಲ್ಲಿ ಇಳಿದಾಗ "ಕೊನೆಗೂ ತಾಯ್ನಾಡಿಗೆ ಬಂದೆ" ಎಂಬ ನೆಮ್ಮದಿ ಮೂಡುತ್ತದೆ. ಆದರೆ ಸಾಂಸ್ಕೃತಿಕವಾಗಿ ನಾವು ಭಾರತಕ್ಕೆ ಬಂದಿದ್ದರೂ, ನಮ್ಮ ದೇಹ ಮಾತ್ರ ಇನ್ನೂ ಚಿಕಾಗೋದಲ್ಲೇ ಉಳಿದಿರುತ್ತದೆ.
ಬೆಂಗಳೂರಿನಲ್ಲಿ ಮಧ್ಯಾಹ್ನ 2 ಗಂಟೆಯ ಬಿಸಿಲಿದ್ದಾಗ, ನಮ್ಮ ಕಣ್ಣುಗಳು ನಿದ್ದೆಯ ಭಾರದಿಂದ ಬಳಲಿರುತ್ತವೆ. (ಏಕೆಂದರೆ ಚಿಕಾಗೋದಲ್ಲಿ ಆಗ ನಡುರಾತ್ರಿ 2 ಗಂಟೆ!). ಎಲ್ಲರೂ ರಾತ್ರಿ ನೆಮ್ಮದಿಯಿಂದ ಮಲಗುವಾಗ, ಹಸಿವಾಗಲು ಶುರುವಾಗುತ್ತದೆ ಮತ್ತು ಇಡೀ ಮನೆ ನಿಶ್ಯಬ್ದವಾಗಿದ್ದಾಗ ನಮ್ಮ ಮಿದುಳು ಅತ್ಯಂತ ಚುರುಕಾಗಿ ಜಾಗೃತವಾಗಿರುತ್ತದೆ.
ಚಿಕಾಗೋ-ಲಂಡನ್-ಬೆಂಗಳೂರು ಮಾರ್ಗದ ಪ್ರಯಾಣವು ಕೇವಲ ಒಂದು ಪ್ರಯಾಣವಲ್ಲ, ಅದು ಮಾನವನ ತಂತ್ರಜ್ಞಾನ ಮತ್ತು ನಿಸರ್ಗದ ನಿಯಮಗಳ ನಡುವಿನ ಅದ್ಭುತ ಸಂಘರ್ಷ. ಕ್ಷಣ ಕ್ಷಣಕ್ಕೂ ಬದಲಾಗುವ ಟೈಮ್ ಜೋನ್ಗಳು ನಮ್ಮ ದೇಹವನ್ನು ದಂಡಿಸಿದರೂ, ಮಾನಸಿಕವಾಗಿ ಅದೊಂದು ವಿಶಿಷ್ಟ ಅನುಭೂತಿಯನ್ನು ನೀಡುತ್ತದೆ.
ಎರಡು ದಿನಗಳ ಕಾಲ ನಿದ್ದೆಗೆಟ್ಟು, ಹಸಿವಿನ ನಿಯಮಗಳನ್ನು ಮರೆತು ನಡೆಸಿದ ಈ ಪಯಣ, ಬದುಕಿನ ನೆನಪಿನ ಬುತ್ತಿಯಲ್ಲಿ ಸದಾ ಹಸಿರಾಗಿ ಉಳಿಯುವ ಒಂದು 'ಕಾಲಾತೀತ' ಅನುಭವ!
ಅಮೆರಿಕ ಎಂದರೆ ಕೇವಲ ಎತ್ತರದ ಗಗನಚುಂಬಿ ಕಟ್ಟಡಗಳಷ್ಟೇ ಅಲ್ಲ, ದಾರಿ ತಪ್ಪಿದ ಹಕ್ಕಿಯೊಂದು ಗೂಡು ಹುಡುಕುವಂತೆ ಮನಸ್ಸು ನಿರಾಳವಾಗಿ ಕುಳಿತುಕೊಳ್ಳುವ ನಿಶ್ಯಬ್ದ ತಾಣಗಳೂ ಹೌದು.
ನಾನು ಅಮೆರಿಕದ ನೆಲಕ್ಕೆ ಕಾಲಿಟ್ಟಾಗಲೆಲ್ಲ, ನನ್ನ ಪಾದಗಳು ತಾವಾಗಿಯೇ ಒಯ್ಯುವ ಒಂದು ಜಾಗವಿದ್ದರೆ ಅದು Barnes & Noble ಪುಸ್ತಕದ ಅಂಗಡಿ. ಜನರೆಲ್ಲ ಡಿಸ್ನಿಲ್ಯಾಂಡ್ನ ಕೃತಕ ಬೆಳಕಿನಲ್ಲೋ ಅಥವಾ ಟೈಮ್ಸ್ ಸ್ಕ್ವೇರ್ನ ಗದ್ದಲದಲ್ಲೋ ಅಥವಾ ಇನ್ನೆಲ್ಲೋ ಖುಷಿ ಹುಡುಕುತ್ತಿದ್ದರೆ, ನನಗೆ ಮಾತ್ರ ಅಮೆರಿಕದ ಅತ್ಯಂತ ಆಪ್ತವಾದ ಮತ್ತು ನಿರತಿಶಯ ಆನಂದ ಕೊಡುವ ತಾಣವಾಗಿ ಕಾಣಿಸುವುದು ಈ ಪುಸ್ತಕಗಳ ಅರಮನೆ. ಅಲ್ಲಿಗೆ ಹೋಗದೆ ಮರಳುವುದೆಂದರೆ, ಮಳೆಯಲ್ಲಿ ನೆನೆಯದೇ ಛತ್ರಿ ಹಿಡಿದು ನಡೆದಂತೆ!
ಕೆಲವು ಸಲ ನಾನು ದಿನಗಟ್ಟಲೆ ಈ ಪುಸ್ತಕದ ಅಂಗಡಿಯಲ್ಲೇ ಕಳೆದುಹೋಗಿದ್ದುಂಟು. ಅಲ್ಲಿ ಸಮಯ ಕರಗುವುದು ಗಡಿಯಾರದ ಮುಳ್ಳಿನ ವೇಗದಲ್ಲಲ್ಲ, ಬದಲಿಗೆ ಪುಸ್ತಕದ ಪುಟಗಳು ಉರುಳುವ ಆಪ್ತ ನಿಧಾನಗತಿಯಲ್ಲಿ.
ಬಾರ್ನೆಸ್ ಅಂಡ್ ನೊಬಲ್ ಭಾರೀ ಗಾಜಿನ ಬಾಗಿಲು ತಳ್ಳಿ ಒಳಗೆ ಹೆಜ್ಜೆ ಇಡುತ್ತಿದ್ದಂತೆಯೇ, ಟ್ರಾಫಿಕ್ನ ಗಿಜಿಗಿಜಿ ಎಲ್ಲವೂ ತಟಸ್ಥವಾಗಿಬಿಡುತ್ತವೆ. ಒಳಗೆ ನಮ್ಮನ್ನು ಎದುರುಗೊಳ್ಳುವುದು ಹೊಸದಾಗಿ ಅಚ್ಚಾದ ಸಾವಿರಾರು ಪುಸ್ತಕಗಳ ಕಾಗದದ ಸಂಯುಕ್ತ ಸುವಾಸನೆ! ಅದೊಂದು ಅದೃಶ್ಯ ಆಮಂತ್ರಣ, ಅಲ್ಲಿ ಕಳೆದುಹೋಗಲು ಅಷ್ಟು ಸಾಕು.
ಪ್ರತಿಯೊಂದು ಪುಸ್ತಕವೂ ಒಬ್ಬ ಮನುಷ್ಯನ ಮನಸ್ಸಿನ ಕಿಟಕಿ. ಇಲ್ಲಿ ಸಾವಿರಾರು ಕಿಟಕಿಗಳು ನಮಗಾಗಿ ತೆರೆದುಕೊಂಡು ಕಾಯುತ್ತಿರುತ್ತವೆ. ಇತ್ತೀಚಿನ ಬೆಸ್ಟ್ ಸೆಲ್ಲರ್ಗಳಿಂದ ಹಿಡಿದು ಜಗತ್ತಿನ ಯಾವುದೋ ಮೂಲೆಯ ಇತಿಹಾಸ, ವಿಮಾನಯಾನದ ರಹಸ್ಯಗಳು, ಜಪಾನಿ ಸಂಸ್ಕೃತಿಯ ಒಳನೋಟಗಳವರೆಗಿನ ಪುಸ್ತಕಗಳು ಅಚ್ಚುಕಟ್ಟಾಗಿ ಜೋಡಿಸಲ್ಪಟ್ಟಿರುತ್ತವೆ. ಆ ಪುಸ್ತಕಗಳ ಬೆನ್ನುಪಟ್ಟಿಯ (ಸ್ಪೈನ್) ಮೇಲೆ ಕಣ್ಣಾಡಿಸುತ್ತಾ ಸಾಗುವುದೇ ಒಂಥರಾ ಹಗಲುಗನಸಿನ ಪಯಣ.
ಈ ಅಂಗಡಿಯ ಅತ್ಯಂತ ಸುಂದರವಾದ ಸಂಗತಿಯೆಂದರೆ, ಇಲ್ಲಿ ‘ಕೊಳ್ಳುವವನು’ ಮತ್ತು ‘ಓದುವವನು’ ಎಂಬ ಭೇದವಿಲ್ಲ. ಕಮರ್ಷಿಯಲ್ ಜಗತ್ತಿನ ಕಟ್ಟುಪಾಡುಗಳನ್ನು ಮೀರಿ ನಿಂತ ವಿನ್ಯಾಸವಿದು. ಅಂಗಡಿಯ ಮೂಲೆ ಮೂಲೆಗಳಲ್ಲಿ, ದೊಡ್ಡ ಕಿಟಕಿಗಳ ಪಕ್ಕದಲ್ಲಿ ಆರಾಮದಾಯಕವಾದ ಸೋಫಾಗಳನ್ನು ಹಾಕಿರುತ್ತಾರೆ. ನೀವು ಯಾವುದೇ ಪುಸ್ತಕವನ್ನು ಎತ್ತಿಕೊಂಡು ಹೋಗಿ ಅಲ್ಲಿ ರಾಜನಂತೆ ಕುಳಿತು ಓದಬಹುದು. ಯಾರೂ ನಿಮ್ಮನ್ನು ಬಂದು ‘ಯಾಕೆ ಪುಸ್ತಕ ಖರೀದಿಸುತ್ತಿಲ್ಲ?’ ಎಂದು ಕೇಳುವುದಿಲ್ಲ. ಅಲ್ಲಿನ ಸಿಬ್ಬಂದಿ ಕೂಡ ನಿಮ್ಮ ಓದಿನ ಏಕಾಂತಕ್ಕೆ ಭಂಗ ತರದೇ ಮುಗುಳ್ನಕ್ಕು ಸಾಗುತ್ತಾರೆ.
ಎಷ್ಟೋ ಮಧ್ಯಾಹ್ನಗಳು ಕೇವಲ ಒಂದು ಕಾದಂಬರಿಯ ಮೊದಲ ಮೂರು ಅಧ್ಯಾಯಗಳನ್ನು ಓದುತ್ತಾ, ಕಿಟಕಿಯಿಂದ ಹೊರಗೆ ಉದುರುವ ಎಲೆಗಳನ್ನು ನೋಡುತ್ತಾ ಕಳೆದುಹೋಗುತ್ತವೆ. ಅದು ಕೇವಲ ಸಮಯ ಕಳೆಯುವುದಲ್ಲ, ನಮ್ಮೊಳಗಿನ ಓದಿನ ತವಕವನ್ನು ಶಾಂತಗೊಳಿಸಿಕೊಳ್ಳುವುದು.
ಅಂಗಡಿಯ ಒಳಗಿರುವ ಕೆಫೆ ಇದೆಯಲ್ಲ, ಅದು ಅಕ್ಷರಶಃ ಜೀವಲೋಕದ ಒಂದು ಗುಟುಕು. ಬಿಸಿಬಿಸಿ ಕಾಫಿಯ ಕಪ್ ಹಿಡಿದು, ನೆಚ್ಚಿನ ಲೇಖಕನ ಸಾಲುಗಳನ್ನು ಓದುತ್ತಾ ಕುಳಿತುಕೊಳ್ಳುವ ಆ ಕ್ಷಣ ಇದೆಯಲ್ಲ, ಅದು ಇಡೀ ದಿನದ ಆಯಾಸವನ್ನು ಮರೆಸುವ ಧ್ಯಾನಸ್ಥ ಸ್ಥಿತಿ.
ಅಲ್ಲಿ ನಿಮ್ಮ ಪಕ್ಕದಲ್ಲೇ ಯಾರೋ ಅಪರಿಚಿತ ವೃದ್ಧರೊಬ್ಬರು ದಪ್ಪನೆಯ ಇತಿಹಾಸದ ಪುಸ್ತಕ ಓದುತ್ತಿರುತ್ತಾರೆ, ಮಗದೊಂದು ಮೂಲೆಯಲ್ಲಿ ಹದಿಹರೆಯದ ಹುಡುಗಿಯೊಬ್ಬಳು ಕಾವ್ಯದ ಪುಟಗಳಲ್ಲಿ ಮುಳುಗಿರುತ್ತಾಳೆ. ನಾವ್ಯಾರೂ ಒಬ್ಬರಿಗೊಬ್ಬರು ಪರಿಚಿತರಲ್ಲ, ಆದರೂ ನಾವೆಲ್ಲರೂ ‘ಅಕ್ಷರ’ ಎಂಬ ಒಂದೇ ನೂಲಿನಿಂದ ಬಂಧಿಸಲ್ಪಟ್ಟ ಒಂಟಿ ಜೀವಿಗಳು. ಈ ಮೌನ ಸಂವಹನವಿದೆಯಲ್ಲ, ಅದು ಒಂದು ಪುಸ್ತಕ ಓದಿನ ಸಾವಿಗೆ ಸಮಾನ.
ಇಂದಿನ ಡಿಜಿಟಲ್ ಕಾಲದಲ್ಲಿ ಕಿಂಡಲ್ ಅಥವಾ ಆಡಿಯೋ ಬುಕ್ಸ್ಗಳು ಜಗತ್ತನ್ನು ಆವರಿಸಿರಬಹುದು. ಆದರೆ ಬಾರ್ನೆಸ್ ಅಂಡ್ ನೊಬಲ್ ಇಂದಿಗೂ ಮುಟ್ಟಿ ಆಸ್ವಾದಿಸುವ ಕಾಗದದ ಸಂಸ್ಕೃತಿಯನ್ನು ಹೆಮ್ಮೆಯಿಂದ ಉಳಿಸಿಕೊಂಡಿದೆ.
ವಿಶೇಷವಾಗಿ ಇಲ್ಲಿ ಸಿಗುವ ಹಾರ್ಡ್ಬೌಂಡ್ ಪುಸ್ತಕಗಳು, ಕ್ಲಾಸಿಕ್ ಸಾಹಿತ್ಯದ ವಿಶೇಷ ಆವೃತ್ತಿಗಳು ಕಣ್ಣಿಗೆ ಬಿದ್ದರೆ ಕೈಗಳು ತಾವಾಗಿಯೇ ಜೇಬಿನತ್ತ ಸಾಗುತ್ತವೆ. ಪುಸ್ತಕದ ಪುಟಗಳನ್ನು ಮಡಚದೇ, ಅದಕ್ಕೊಂದು ಸುಂದರವಾದ ಬುಕ್ಮಾರ್ಕ್ ಇಟ್ಟು, ಅದನ್ನೊಂದು ಪರಂಪರೆಯ ಆಸ್ತಿಯಂತೆ ಕಾಯ್ದುಕೊಳ್ಳುವ ಹವ್ಯಾಸವಿರುವವರಿಗೆ ಇದೊಂದು ಹೇಳಿಮಾಡಿಸಿದ ತಾಣ.
ನನಗೆ ವೈಯಕ್ತಿಕವಾಗಿ ಇಲ್ಲಿನ ಪ್ರವಾಸ ಕಥನಗಳ ಮತ್ತು ನಕ್ಷೆಗಳ ವಿಭಾಗವೆಂದರೆ ಪಂಚಪ್ರಾಣ. ಜಗತ್ತಿನ ನಾನಾ ದೇಶಗಳ ಗಲ್ಲಿ-ಗಲ್ಲಿಗಳ ವಿವರಗಳುಳ್ಳ ಕಾಫಿ ಟೇಬಲ್ ಪುಸ್ತಕಗಳನ್ನು ಮಡಿಲಲ್ಲಿಟ್ಟುಕೊಂಡು ಪುಟ ತಿರುಗಿಸುತ್ತಿದ್ದರೆ, ನಾವೇ ಆ ಭೂಭಾಗದಲ್ಲಿ ನಡೆದಾಡುತ್ತಿರುವ ಭ್ರಮೆ. ಭೂತಾನ್ನ ಶಾಂತ ಕಣಿವೆಗಳು, ದಕ್ಷಿಣ ಆಫ್ರಿಕಾದ ವನ್ಯಲೋಕ ಅಥವಾ ಒಮಾನ್ನ ಮರಳುಗಾಡು ಎಲ್ಲವೂ ಆ ಕಾಗದದ ಮೇಲೆ ಜೀವ ತಳೆದು ನಿಲ್ಲುತ್ತವೆ.
ಕೈಯಲ್ಲಿ ಒಂದಿಷ್ಟು ಆಯ್ದ ಪುಸ್ತಕಗಳ ಚೀಲ ಹಿಡಿದು ಹೊರಬರುವಾಗ ಹೆಂಗಸರಿಗೆ ಕೃಷ್ಣಯ್ಯ ಚೆಟ್ಟಿ ಒಡವೆ ಅಂಗಡಿಯಿಂದ ಬರುವ ಪುಳಕ!
ಅಮೆರಿಕದ ಜಗಮಗಿಸುವ ಮಾಲ್ಗಳ ನಡುವೆ ಈ ಪುಸ್ತಕದ ಅಂಗಡಿ ಒಬ್ಬ ಓದುಗನಿಗೆ ಅಕ್ಷರ ದಿಕ್ಸೂಚಿ. ಅದು ಕಳೆದುಹೋದ ನಮ್ಮನ್ನು ನಾವೇ ಹುಡುಕಿಕೊಳ್ಳುವ, ಅಕ್ಷರಗಳ ಬೆಳಕಿನಲ್ಲಿ ನಮ್ಮ ಆಂತರ್ಯವನ್ನು ತಂಪಾಗಿಸಿಕೊಳ್ಳುವ ಒಂದು ಅದ್ಭುತ ಲೋಕ.
ಅಮೆರಿಕಕ್ಕೆ ಬಂದಾಗ ಅಲ್ಲಿಗೆ ಹೋಗದಿದ್ದರೆ, ನನ್ನ ಪಾಲಿಗೆ ಪ್ರವಾಸವೇ ಅಪೂರ್ಣ!
Bees undoubtedly hold the highest place among nature's wonderful creations. My past four years of experience in beekeeping is living proof of how a farming practice can be highly successful by aligning with the laws of nature, without excessive human intervention.
Just five bee boxes kept in the courtyard of my house or in a corner of my garden have become an inseparable part of my life today. Obtaining this 'sweet' reward without any huge capital investment or hours of daily labor is truly surprising and deeply satisfying.
My beekeeping routine is incredibly simple. Every morning as soon as I wake up, it is my habit to go near the bee boxes and take a quick look. This is just a five-minute job. During this time, all I focus on is the safety of the bees. I ensure that enemies of the beehive—such as wasps, ants, lizards, or any other insects and pests—have not attacked them.
It is a pure joy to see if the entrance of the box is clean and if the bees are flying around enthusiastically as usual. Once I am assured that everything is safe there, my beekeeping work for the day is done! For the rest of the day, I leave the entire process completely to the bees.
"The less we disturb nature, the more benefits nature gives us." Frequently opening the box and interfering with the bees' work only reduces their efficiency.
Every day, the bees from my five boxes fly kilometers away to suck nectar from flowers. Watching the entire craftsmanship inside the hive—building the wax chambers, caring for the queen bee, nurturing the larvae, and converting the nectar into honey—is an unimaginable experience.
The reward I get for this silent supervision is a whopping four liters of pure honey every month. This is a direct gift from nature, without any adulteration or chemicals. Only we know the difference in taste and quality between the honey available in the market and the honey extracted from our own boxes. The day we extract honey once a month turns into a mini festival at our house!
Out of the four liters of honey I get, I keep two liters for my household use. It is a habit to use this honey for daily Ayurvedic purposes, or with hot dosas, chapatis, and lemon juice in the morning.
I give the remaining two liters of honey as a loving gift to my close friends and nearby relatives. In this day and age when pure honey is rare to find in the market, the joy this pure honey brings to their faces is unmatched. When they say, "The honey from your house is wonderful," that single word is the highest honor I receive for the small effort I make.
Beekeeping is not just agriculture; it is an art of living with nature. It is amazing how such great benefits can be derived from just five boxes and a mere five minutes of daily supervision. This is a beautiful hobby that requires minimal effort, zero investment (after the initial cost), and gives maximum satisfaction. If you have space in your house, place at least one or two bee boxes, and leave the rest to them.
My well-wisher, mentor, and someone I hold in the highest regard, Shri Vijay Sankeshwar, called me this afternoon. When our marketing and circulation boys met him at his Hubballi office and handed over a copy of "Pravasi Prapancha," he flipped through all the pages, glanced over them intently, and immediately dialed my number.
The next ten minutes of our conversation were exclusively dedicated to "Pravasi Prapancha." Impressing Sankeshwar is no ordinary feat. He never indulges in empty praise for anyone or anything. If he dislikes a publication, he is not the one to mince words—he would bluntly say, 'Shut this down, it will do you some good.'
Yet, he showered full-throated praise on "Pravasi Prapancha." He explicitly stated, "I absolutely love this experiment of yours."
Furthermore, he made our boys sit with him, discussed matters regarding the newspaper's circulation, distribution, and advertising for nearly half an hour, and served them tea before they left. He also strictly reminded them, "Not a single issue should be missed."
This is truly the ultimate and grandest validation for our hard work and the quality of the publication! After all, an endorsement with Sankeshwar’s 'seal of approval' is no ordinary thing!
#PravasiPrapancha #VijaySankeshwara