ಮಹಾರಾಷ್ಟ್ರ ನವನಿರ್ಮಾಣ ಸೇನೆಯ (ಎಂಎನ್ಎಸ್) ಪ್ರಧಾನ ಕಾರ್ಯದರ್ಶಿ ಶ್ರೀ ಯೋಗೇಶ್ ಪರುಲೇಕರ್, ಮುಂಬೈ ಘಟಕದ ಅಧ್ಯಕ್ಷ ಶ್ರೀ ಸಂದೀಪ್ ದೇಶಪಾಂಡೆ ನನ್ನನ್ನು ಭೇಟಿಯಾಗಲು ನಮ್ಮ ಕಚೇರಿಗೆ ಬಂದಿದ್ದರು. ಅತ್ಯಂತ ಮಹತ್ವದ ವಿಷಯಗಳ ಕುರಿತು ನಾವು ಚರ್ಚೆ ನಡೆಸಿದೆವು.
ಸಂದೀಪ್ ದೇಶಪಾಂಡೆ ನನಗೆ ಹಳೆಯ ಪರಿಚಯ. 2017ರ ಜೂನ್ ತಿಂಗಳಿನಲ್ಲಿ ನಾವು ಬೆಂಗಳೂರಿನಲ್ಲಿ ಏರ್ಪಡಿಸಿದ್ದ ಹಿಂದಿಹೇರಿಕೆ ವಿರೋಧಿಸುವ ದುಂಡುಮೇಜಿನ ಸಭೆಯೊಂದಕ್ಕೆ ಅವರನು ಆಹ್ವಾನಿಸಿದ್ದೆವು. ಅವರು ಬಂದು ಸಭೆಯಲ್ಲಿ ಪಾಲ್ಗೊಂಡಿದ್ದರು. ನಮ್ಮ ಮೆಟ್ರೋದಲ್ಲಿ ಹಿಂದಿಹೇರಿಕೆಯನ್ನು ತೊಲಗಿಸುವ ಹೋರಾಟದ ಭಾಗವಾಗಿ ಈ ದುಂಡುಮೇಜಿನ ಸಭೆಯನ್ನು ಆಯೋಜಿಸಲಾಗಿತ್ತು.
ಶ್ರೀ ರಾಜ್ ಠಾಕ್ರೆಯವರ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನೆ ಮೊದಲಿನಿಂದಲೂ ಭಾರತೀಯ ಭಾಷೆಗಳ ವಿರುದ್ಧ ಹಿಂದಿಯನ್ನು ಹೇರುವ ಹಿಂದಿ ಸಾಮ್ರಾಜ್ಯಶಾಹಿಯ ವಿರುದ್ಧ ಸೆಟೆದು ನಿಂತು ಹೋರಾಟಗಳನ್ನು ಸಂಘಟಿಸುತ್ತ ಬಂದಿದೆ. ಕರ್ನಾಟಕ ರಕ್ಷಣಾ ವೇದಿಕೆ 2005ರಿಂದಲೇ ಹಿಂದಿಹೇರಿಕೆಯ ಅಪಾಯಗಳನ್ನು ಗ್ರಹಿಸಿ ನಿರಂತರ ಚಳವಳಿ, ಅಭಿಯಾನಗಳನ್ನು ಹಮ್ಮಿಕೊಳ್ಳುತ್ತ ಬಂದಿದೆ. ಎರಡೂ ಸಂಘಟನೆಗಳು ಒಂದೇ ರೀತಿಯ ವಿಚಾರಧಾರೆಗಳನ್ನು ಪ್ರತಿಪಾದಿಸುತ್ತ ಬಂದಿವೆ.
ಶ್ರೀ ಯೋಗೇಶ್ ಪಾರುಲೇಕರ್ ಮತ್ತು ಸಂದೀಪ್ ದೇಶಪಾಂಡೆಯವರು ಅತ್ಯಂತ ಗಂಭೀರವಾದ ವಿಷಯಗಳನ್ನು ಪ್ರಸ್ತಾಪಿಸಿದರು. ವಿಶೇಷವಾಗಿ ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳಿಗೆ ವ್ಯವಸ್ಥಿತ ರೂಪದಲ್ಲಿ ನಡೆಯುತ್ತಿರುವ ಮಹಾವಲಸೆಯ ಬಗ್ಗೆ ಚರ್ಚಿಸಿದರು. ಮಹಾರಾಷ್ಟ್ರದಲ್ಲಿ ಮರಾಠಿ ಭಾಷಿಕರು ಮತ್ತು ಕರ್ನಾಟಕದಲ್ಲಿ ಕನ್ನಡ ಭಾಷಿಕರು ಅನುಭವಿಸುತ್ತಿರುವ ಸಮಸ್ಯೆಗಳು ಬಹುತೇಕ ಒಂದೇ ಆಗಿದೆ. ಮಹಾರಾಷ್ಟ್ರದಲ್ಲಿ ಬಹಳ ಮೊದಲಿನಿಂದಲೇ ಈ ಸಮಸ್ಯೆಗಳು ಆರಂಭವಾದವು. ಮರಾಠಿ ಭಾಷೆಯನ್ನು ದೇವನಾಗರಿ ಲಿಪಿಯಲ್ಲಿ ಬರೆಯಲಾಗುವುದರಿಂದ ಅದೇ ಲಿಪಿಯನ್ನು ಬಳಸುವ ಹಿಂದಿ ಭಾಷಿಕರು ಬಹಳ ಸುಲಭವಾಗಿ ಮಹಾರಾಷ್ಟ್ರದಲ್ಲಿ ನೆಲೆ ನಿಲ್ಲಲು ಸಾಧ್ಯವಾಯಿತು ಎಂಬುದನ್ನು ಸಂದೀಪ್ ದೇಶಪಾಂಡೆ ಹೇಳಿದರು.
ಮಹಾರಾಷ್ಟ್ರದ ಭೂಮಿ ಮರಾಠಿಗರ ಕೈತಪ್ಪಿಹೋಗುತ್ತಿದೆ. ಮುಂಬೈ ಮಾತ್ರವಲ್ಲ, ಎರಡು ಮತ್ತು ಮೂರನೇ ಹಂತದ ನಗರಗಳಲ್ಲೂ ಉತ್ತರ ಭಾರತೀಯರು ಬಂದು ಬೇರುಬಿಡುತ್ತಿದ್ದಾರೆ. ರಾಜಕೀಯವಾಗಿಯೂ ಬೆಳೆಯುತ್ತಿದ್ದಾರೆ. ಉತ್ತರ ಭಾರತೀಯರ ವಲಸೆಗಾಗಿಯೇ ಸುಮಾರು 40 ರೈಲುಗಳು ಪ್ರತಿನಿತ್ಯ ಮಹಾರಾಷ್ಟ್ರದ ನಗರಗಳಿಗೆ ಬರುತ್ತಿವೆ ಎಂದು ಯೋಗೇಶ್ ಪಾರುಲೇಕರ್ ಹೇಳಿದರು. ಇದೆಲ್ಲವೂ ಕರ್ನಾಟಕದ ವಿಷಯದಲ್ಲೂ ನಡೆಯುತ್ತಿದೆ. ನಮ್ಮಲ್ಲೂ ಇದೇ ಸಮಸ್ಯೆಗಳು ಇವೆ ಎಂದು ನಾನು ಹೇಳಿದೆ.
ಇದೇ ಸಂದರ್ಭದಲ್ಲಿ ಹಿಂದಿ ಹೇರಿಕೆ, ಕ್ಷೇತ್ರ ಪುನರ್ ವಿಂಗಡಣೆ, ಜನಸಂಖ್ಯಾ ನಿಯಂತ್ರಣದ ಹೆಸರಿನಲ್ಲಿ ಆಗಿರುವ ಅನ್ಯಾಯಗಳು, ತೆರಿಗೆ ಹಂಚಿಕೆಯಲ್ಲಿ ನಿರಂತರವಾಗಿ ನಡೆದುಬಂದಿರುವ ಅನ್ಯಾಯಗಳು ಇತ್ಯಾದಿ ವಿಷಯಗಳ ಕುರಿತು ಚರ್ಚಿಸಿದೆವು.
ಹಿಂದಿಯೇತರ ಭಾಷಾ ರಾಜ್ಯಗಳು ಅನುಭವಿಸುತ್ತಿರುವ ಸಮಸ್ಯೆಗಳನ್ನು ಈ ಎಲ್ಲ ರಾಜ್ಯಗಳು ಒಂದಾಗಿ ನಿಂತು ಎದುರಿಸಬೇಕಾಗಿರುವ ಅಗತ್ಯಗಳ ಕುರಿತು ಚರ್ಚೆಯಾಯಿತು. ಈ ಹಿನ್ನೆಲೆಯಲ್ಲಿ ಭಾರತೀಯ ಭಾಷೆಗಳ ವೇದಿಕೆ (Indian Languages Forum) ರಚಿಸಲು ನಿರ್ಧರಿಸಲಾಯಿತು. ಈ ವೇದಿಕೆಯಲ್ಲಿ ಕನ್ನಡ-ಮರಾಠಿ ಭಾಷಿಕರು ಮಾತ್ರವಲ್ಲದೆ ತಮಿಳು, ತೆಲುಗು, ಮಲಯಾಳಂ, ಪಂಜಾಬಿ, ಬಂಗಾಳಿ ಮತ್ತು ಇತರ ಭಾರತೀಯ ಭಾಷೆಗಳನ್ನು ಆಡುವ ಸಮುದಾಯಗಳನ್ನು ಒಟ್ಟಿಗೆ ತರುವ ಪ್ರಯತ್ನಗಳನ್ನು ಮಾಡುವ ತೀರ್ಮಾನ ಕೈಗೊಳ್ಳಲಾಯಿತು.
ನಾವು ಎದುರಿಸುತ್ತಿರುವ ಸಮಸ್ಯೆ, ಸವಾಲು ಸಣ್ಣದೇನೂ ಅಲ್ಲ. ಕರ್ನಾಟಕ, ಮಹಾರಾಷ್ಟ್ರದಂಥ ರಾಜ್ಯಗಳ ಭೌಗೋಳಿಕ, ಸಾಂಸ್ಕೃತಿಕ, ಸಾಮಾಜಿಕ ಚಹರೆಯೇ ಬದಲಾಗುತ್ತಿದೆ. ನಾವೆಲ್ಲರೂ ಒಂದೇ ದೋಣಿಯಲ್ಲಿ ಪಯಣಿಸುತ್ತಿದ್ದೇವೆ. ಹೀಗಾಗಿ ಒಂದಾಗುವ ಅನಿವಾರ್ಯವಾಗಿದೆ ಎಂಬ ನಿರ್ಧಾರಕ್ಕೆ ನಾವು ಬಂದೆವು. ಮುಂಬರುವ ದಿನಗಳಲ್ಲಿ ಈ ಒಗ್ಗಟ್ಟಿನ ಚಟುವಟಿಕೆಗಳನ್ನು ಮತ್ತಷ್ಟು ತೀವ್ರಗತಿಯಲ್ಲಿ ಮುಂದುವರೆಸುತ್ತ ಹೋಗುತ್ತೇವೆ.
ಯಶ್ ನಿರ್ಮಾಣ, ನಟನೆಯ ಟಾಕ್ಸಿಕ್ ಚಿತ್ರ ಇಂದು ಜಗತ್ತಿನಾದ್ಯಂತ ಬಿಡುಗಡೆಯಾಗಿದೆ. ಚಿತ್ರದ ಕುರಿತು ಒಳ್ಳೆಯ ಅಭಿಪ್ರಾಯಗಳು ಕೇಳಿಬರುತ್ತಿವೆ. ಚಿತ್ರ ಹೊಸ ದಾಖಲೆಗಳನ್ನು ಸೃಷ್ಟಿಸಲಿ ಎಂದು ನಾನು ಹಾರೈಸುತ್ತೇನೆ.
ಯಶ್ ನಾವೆಲ್ಲ ನೋಡನೋಡುತ್ತಿದ್ದಂತೆ ಎತ್ತರಕ್ಕೆ ಬೆಳೆದ ನಟ. ತಾವು ಬೆಳೆಯುವ ಜೊತೆಗೆ ಕನ್ನಡ ಚಿತ್ರರಂಗವನ್ನೂ ಅವರು ಬೆಳೆಸಿದ್ದಾರೆ. ಇದಕ್ಕಾಗಿ ಸಾಕಷ್ಟು ಪರಿಶ್ರಮ ಪಟ್ಟಿದ್ದಾರೆ. ಶ್ರದ್ಧೆಯಿಂದ ಕೆಲಸ ಮಾಡಿದ್ದಾರೆ. ಒಬ್ಬ ಸಾಮಾನ್ಯ ಹಿನ್ನೆಲೆಯ ಮೈಸೂರಿನ ಪಡುವಾರಹಳ್ಳಿಯ ಹುಡುಗ ಇಷ್ಟು ಎತ್ತರಕ್ಕೆ ಏರಬಹುದು ಎಂದು ಬಹುಶಃ ಯಾರೂ ಊಹಿಸಿರಲಿಲ್ಲವೇನೋ? ಬಹುಶಃ ಯಶ್ ಅವರೊಬ್ಬರ ಹೊರತಾಗಿ.
ಯಶ್ ವಿಷಯದಲ್ಲಿ ನನಗೆ ತುಂಬ ಇಷ್ಟವಾಗುವುದು ಅವರ ಕನಸುಗಾರಿಕೆ ಮತ್ತು ಸಾಹಸ ಮನೋಭಾವ. ನಮ್ಮ ಸುತ್ತಮುತ್ತ ಆಗಾಗ ನಾವು ನೋಡುವ ಜನರನ್ನು ಗಮನಿಸಿ. ನಮ್ಮಿಂದ ಎಲ್ಲಾಗುತ್ತೆ? ಇದೆಲ್ಲ ನಾವು ಮಾಡಕ್ಕೆ ಆಗುತ್ತಾ? ಅದೆಲ್ಲಾ ಸಾಧ್ಯನಾ? ಎಂಬಂಥ ನೈರಾಶ್ಯದ ಮಾತುಗಳನ್ನೇ ನಾವು ಕೇಳುತ್ತೇವೆ. ಯಶ್ ಈ ರೀತಿಯ ನಿರಾಶಾವಾದಿಯಲ್ಲ, ಕನಸು ಕಟ್ಟುವುದು ಅವರಿಗೆ ಗೊತ್ತಿದೆ, ಅದನ್ನು ನನಸು ಮಾಡಿಕೊಳ್ಳುವ ದಾರಿಯನ್ನು ಹುಡುಕಿಕೊಳ್ಳುವ ಮನೋಸ್ಥೈರ್ಯ, ಸಂಕಲ್ಪವೂ ಅವರಿಗೆ ಇದೆ.
ಯಶ್ ಅಭಿನಯದ ಮೊಗ್ಗಿನ ಮನಸು ಸಿನಿಮಾ ಬಿಡುಗಡೆ ಸಂದರ್ಭ ಎನಿಸುತ್ತದೆ. ಅವರೊಮ್ಮೆ ನಮ್ಮ ಗಾಂಧಿನಗರದ ಕಚೇರಿಗೆ ಬಂದಿದ್ದರು. ಅವರ ಸಿನಿಮಾಗೆ ಪ್ರಮುಖ ಥಿಯೇಟರ್ ಸಿಗದೇ ಇರುವ ಬಗ್ಗೆ ಹೇಳಿದರು. ಥಿಯೇಟರ್ ಮಾಲೀಕರ ಜೊತೆ ಮಾತಾಡಿ ಸಮಸ್ಯೆ ಬಗೆಹರಿಸಿಕೊಡಲು ವಿನಂತಿಸಿದ್ದರು. ನಾನು ಥಿಯೇಟರ್ ಮಾಲೀಕರ ಜೊತೆ ಮತಾಡಿ ಸಮಸ್ಯೆ ಬಗೆಹರಿಸಿದ್ದೆ. ಈಗ ಕಾಲ ನೋಡಿ ಹೇಗೆ ಬದಲಾಗಿದೆ. ಒಂದು ಥಿಯೇಟರ್ ಗಾಗಿ ಕಾತರಿಸುತ್ತಿದ್ದ ಯಶ್ ಅವರ ಟಾಕ್ಸಿಕ್ ಸಿನಿಮಾ ಒಟ್ಟು 12,000 ಸ್ಕ್ರೀನ್ ಗಳಲ್ಲಿ ಬಿಡುಗಡೆಯಾಗಿದೆ! ಅದೂ ಕೂಡ ಜಗತ್ತಿನಾದ್ಯಂತ.
ಯಶ್ ನಮ್ಮ ಹಲವಾರು ಕಾರ್ಯಕ್ರಮಗಳಿಗೆ ಬಂದಿದ್ದಾರೆ. ಅಪ್ಪಟ ಕನ್ನಡಾಭಿಮಾನಿ. ಅವರು ಹೊರರಾಜ್ಯಗಳಿಗೆ ಹೋದಾಗ, ಬೇರೆ ಬೇರೆ ಮಾಧ್ಯಮಗಳಿಗೆ ಸಂದರ್ಶನ ನೀಡುವಾಗ ತಮ್ಮ ಕನ್ನಡತನವನ್ನು ಎಂದೂ ಬಿಟ್ಟುಕೊಟ್ಟವರಲ್ಲ. ಅವರು ತಮ್ಮ ಬೇರುಗಳನ್ನು ಮರೆತಿಲ್ಲ.
ಅವರ ಕೆಜಿಎಫ್ ಸಿನಿಮಾ ಬಿಡುಗಡೆಗೂ ಮುನ್ನ ಅವರು ಅಷ್ಟು ದೊಡ್ಡ ಸಿನಿಮಾ ಮಾಡಿದ್ದಾರೆ ಎಂಬುದನ್ನು ಯಾರೂ ನಂಬಲು ಸಾಧ್ಯವಿರಲಿಲ್ಲ. ಆ ಸಿನಿಮಾ ಬಿಡುಗಡೆಗೂ ಒಂದು ಸಣ್ಣ ಅಡ್ಡಿ ಉಂಟಾಗಿತ್ತು. ನಿರ್ಮಾಪಕರೊಬ್ಬರು ತಡೆಯಾಜ್ಞೆ ತಂದಿದ್ದರು. ಕನ್ನಡದ ಸಿನಿಮಾ ಒಂದು ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡುವಾಗ ಅಡ್ಡಿ ಮಾಡುವುದು ಸರಿಯಲ್ಲ ಎಂದು ನಾನು ಆ ನಿರ್ಮಾಪಕರೊಂದಿಗೆ ಮಾತನಾಡಿ, ಅರ್ಜಿ ಹಿಂದಕ್ಕೆ ಪಡೆಯುವಂತೆ ಮಾಡಿದ್ದೆ. ಕೆಜಿಎಫ್ ಬಿಡುಗಡೆಯಾಯಿತು. ಯಶ್ ಎಂಬ ಮಹಾಸಾಹಸಿ ಇಡೀ ದೇಶಕ್ಕೆ ಪರಿಚಯವಾದರು. ಅದಾದ ನಂತರ ಕೆಜಿಎಫ್-2, ಟಾಕ್ಸಿಕ್ ಮುಂದೆ ಬರಲಿರುವ ರಾಮಾಯಣ ಎಲ್ಲವೂ ಯಶ್ ಅವರ ಮಹತ್ವಾಕಾಂಕ್ಷೆಯ ಯೋಜನೆಗಳೇ.
ಕನಸು ಕಾಣುವುದು ಸುಲಭ. ಆದರೆ ಆ ಕನಸುಗಳ ಹಿಂದೆ ಬಿದ್ದು ತಾನು ಅಂದುಕೊಂಡಿದ್ದನ್ನು ಮಾಡುವುದು ಕಷ್ಟ. ಅದು ಎಲ್ಲರಿಗೂ ಸಾಧ್ಯವಿಲ್ಲ. ನಿರಾಶಾವಾದ, ಅಲ್ಪತೃಪ್ತಿ ಇದ್ದರೆ ಇದೆಲ್ಲ ಸಾಧ್ಯವಾಗುವುದಿಲ್ಲ. ಯಶ್ ಇದೆಲ್ಲವನ್ನು ಮೆಟ್ಟಿ ನಿಂತು ಬೆಳೆದಿದ್ದಾರೆ, ಇನ್ನೂ ಬೆಳೆಯುತ್ತಿದ್ದಾರೆ. ಅವರಿಗೆ ಮತ್ತೊಮ್ಮೆ ಶುಭಾಶಯಗಳು.
@narayanagowdru ನಮ್ಮ ರಾಜ್ಯದ ನಾಯಕರು ತಮ್ಮ ಹೊಟ್ಟೆ ತುಂಬಿಸಿಕೊಳ್ಳುವುದಕ್ಕಾಗಿ ರಾಜಕೀಯ ನಡೆಸುತ್ತಿದ್ದಾರೆ ...........
ಅಷ್ಟೇ ಅಲ್ಲ ನಮ್ಮ ಬಗ್ಗೆ ಸ್ವಲ್ಪವಾದರೂ ಯೋಚಿಸುವುದೇ ಇಲ್ಲ.
ನಮಗಾಗಿ ನಿಂತ ನಾಡಿನ ರಕ್ಷಕ, ಸರ್ ನೀವೇ ....
@narayanagowdru@PriyankKharge ನಕಲಿ ದಾಖಲೆಗಳನ್ನು ಒದಗಿಸುವವರ ವಿರುದ್ಧವೂ ಸಮಗ್ರ ತನಿಖೆ ನಡೆಯಬೇಕು. ಇಂತಹ ಜಾಲವನ್ನು ಪತ್ತೆಹಚ್ಚಿ, ಕಾನೂನುಬದ್ಧವಾಗಿ ಕಠಿಣ ಕ್ರಮ ಕೈಗೊಳ್ಳಬೇಕು.ಎಲ್ಲ ವಿಚಾರಗಳಲ್ಲೂ ನಾವು ಕನ್ನಡಿಗರು ಸುಮ್ಮನೆ ಕೂರುವುದಿಲ್ಲ . ಜೈ ಕರ್ನಾಟಕ , ಜೈ ಕರವೇ , ಜೈ ಕನ್ನಡಿಗರು .
@narayanagowdru@PriyankKharge ಕರ್ನಾಟಕ ಒಂದು ಸುಂದರವಾದ, ರಾಜ್ಯ.
ಯಾವುದೇ ಅಪರಾಧಿ ಶಕ್ತಿಗೂ ನಮ್ಮ ನಾಡಿನಲ್ಲಿ ನೆಲೆಸಲು ಅವಕಾಶ ನೀಡಬಾರದು. ಕರ್ನಾಟಕದ ಶಾಂತಿ, ಭದ್ರತೆ ಮತ್ತು ನೆಮ್ಮದಿ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ. ಜೈ ಕರ್ನಾಟಕ 💛ಜೈ ಕರವೇ ❤️ ಜೈ ಕನ್ನಡಿಗರು!
ಕರ್ನಾಟಕದಲ್ಲಿ ಅಕ್ರಮ ವಲಸೆಯ ವಿರುದ್ಧ ರಾಜ್ಯ ಸರ್ಕಾರ ಕೈಗೊಂಡಿರುವ ಕಟ್ಟುನಿಟ್ಟಿನ ಕ್ರಮವನ್ನು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಗತಿಸುತ್ತದೆ. ಕಳೆದ ಮೂರು ತಿಂಗಳಲ್ಲಿ ಸುಮಾರು 1,000 ಶಂಕಿತ ಅಕ್ರಮ ವಲಸಿಗರನ್ನು ಗುರುತಿಸಲಾಗಿದೆ ಎಂಬ ಗೃಹ ಸಚಿವ ಪ್ರಿಯಾಂಕ್ ಖರ್ಗೆಯವರು @PriyankKharge ಹೇಳಿದ್ದಾರೆ. ಇದುವರೆಗೆ ಕೇವಲ ಬಾಂಗ್ಲಾ ವಲಸಿಗರ ಕುರಿತು ಮಾತುಗಳೇ ಹೆಚ್ಚಾಗಿದ್ದವು. ಗೃಹಸಚಿವರು ಕಾರ್ಯಾಚರಣೆಗೆ ಇಳಿದಿರುವುದು ಸ್ವಾಗತಾರ್ಹ ಬೆಳವಣಿಗೆ.
ಕರ್ನಾಟಕ ಯಾವುದೇ ಅಂತರರಾಷ್ಟ್ರೀಯ ಗಡಿಯನ್ನು ಹೊಂದಿಲ್ಲ. ಹೀಗಿದ್ದರೂ ವಿದೇಶಗಳಿಂದ ಬಂದ ಶಂಕಿತ ಅಕ್ರಮ ವಲಸಿಗರು ರಾಜ್ಯದಲ್ಲಿ ಪತ್ತೆಯಾಗುತ್ತಿರುವುದು ಗಂಭೀರ ವಿಚಾರ. ಅವರು ಯಾವ ಮಾರ್ಗದ ಮೂಲಕ ಕರ್ನಾಟಕ ಪ್ರವೇಶಿಸುತ್ತಿದ್ದಾರೆ, ಅವರಿಗೆ ಯಾರು ಆಶ್ರಯ, ಉದ್ಯೋಗ ಅಥವಾ ನಕಲಿ ದಾಖಲೆಗಳನ್ನು ಒದಗಿಸುತ್ತಿದ್ದಾರೆ ಎಂಬುದರ ಸಮಗ್ರ ತನಿಖೆ ನಡೆಯಬೇಕು. ಅಕ್ರಮ ವಲಸೆಯ ಹಿಂದೆ ಇರುವ ಜಾಲವನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳುವುದು ಅತ್ಯಂತ ಅಗತ್ಯ.
ಅಕ್ರಮ ವಲಸೆ ಎಂಬುದು ಯಾವುದೇ ಒಂದು ಸಮುದಾಯ ಅಥವಾ ಧರ್ಮದ ವಿರುದ್ಧದ ವಿಚಾರವಲ್ಲ. ಇದು ದೇಶದ ಕಾನೂನು, ರಾಷ್ಟ್ರೀಯ ಭದ್ರತೆ ಮತ್ತು ರಾಜ್ಯದ ಆಡಳಿತ ವ್ಯವಸ್ಥೆಗೆ ಸಂಬಂಧಿಸಿದ ವಿಷಯ. ಕಾನೂನುಬದ್ಧವಾಗಿ ಭಾರತಕ್ಕೆ ಬಂದಿರುವ ವಿದೇಶಿಗರಿಗೆ ಯಾವುದೇ ತೊಂದರೆ ನೀಡಬಾರದು. ಆದರೆ ಅಕ್ರಮವಾಗಿ ಪ್ರವೇಶಿಸಿ, ನಕಲಿ ದಾಖಲೆಗಳ ಮೂಲಕ ನೆಲೆಸಿರುವವರ ವಿರುದ್ಧ ಕಾನೂನು ತನ್ನ ಕೆಲಸ ಮಾಡಲೇಬೇಕು. ಇದಕ್ಕಾಗಿ ಮೀನ ಮೇಷ ಎಣಿಸುವ ಯಾವ ಅಗತ್ಯವೂ ಇಲ್ಲ.
ಈ ವಿಚಾರದಲ್ಲಿ ‘ಶೂನ್ಯ ಸಹಿಷ್ಣುತೆ’ ನೀತಿ ಅನುಸರಿಸಲಾಗುವುದು ಹಾಗೂ ಕಾರ್ಯಾಚರಣೆ ನಿರಂತರವಾಗಿ ಮುಂದುವರಿಯಲಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಸ್ಪಷ್ಟಪಡಿಸಿರುವುದನ್ನು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಗತಿಸುತ್ತದೆ. ಇದನ್ನು ಒಂದು ರಾಜಕೀಯ ವಿಷಯವನ್ನಾಗಿ ನೋಡದೆ, ಪ್ರತಿಯೊಬ್ಬ ಕನ್ನಡಿಗರೂ ಈ ಕಾರ್ಯಾಚರಣೆಯನ್ನು ಬೆಂಬಲಿಸಬೇಕು.
ಗಡಿ ಭದ್ರತೆ ಕೇಂದ್ರ ಸರ್ಕಾರದ ಜವಾಬ್ದಾರಿಯಾದರೆ, ರಾಜ್ಯದೊಳಗೆ ಅಕ್ರಮ ವಲಸಿಗರನ್ನು ಗುರುತಿಸಿ ಕಾನೂನುಬದ್ಧ ಕ್ರಮ ಕೈಗೊಳ್ಳುವುದು ರಾಜ್ಯ ಸರ್ಕಾರದ ಜವಾಬ್ದಾರಿ. ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ, ಅಕ್ರಮ ವಲಸೆಯ ಮೂಲವನ್ನೇ ಪತ್ತೆಹಚ್ಚುವ ಅಗತ್ಯವಿದೆ. ಇಷ್ಟೊಂದು ಪ್ರಮಾಣದಲ್ಲಿ ಬಾಂಗ್ಲಾ ವಲಸಿಗರು ಹೇಗೆ ಭಾರತವನ್ನು ಪ್ರವೇಶಿಸುತ್ತಿದ್ದಾರೆ ಎಂಬುದರ ಕುರಿತು ಕೇಂದ್ರ ಸರ್ಕಾರ ತನಿಖೆ ಮಾಡಬೇಕು.
ಕರ್ನಾಟಕದ ಭದ್ರತೆ, ಕಾನೂನು ಸುವ್ಯವಸ್ಥೆ ಮತ್ತು ರಾಜ್ಯದ ಹಿತಾಸಕ್ತಿಯ ರಕ್ಷಣೆಯ ವಿಚಾರದಲ್ಲಿ ಸರ್ಕಾರ ಕೈಗೊಳ್ಳುವ ಪ್ರತಿಯೊಂದು ಕಾನೂನುಬದ್ಧ ಕ್ರಮಕ್ಕೂ ಕರ್ನಾಟಕ ರಕ್ಷಣಾ ವೇದಿಕೆ ಬೆಂಬಲವಾಗಿ ನಿಲ್ಲಲಿದೆ.
ಅಕ್ರಮ ವಲಸೆಯ ವಿರುದ್ಧ ದಿಟ್ಟ ನಿಲುವು ತಳೆದಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಅಭಿನಂದನೆಗಳು. ಹಾಗೆಯೇ ಕರ್ನಾಟಕಕ್ಕೆ ಉತ್ತರದ ರಾಜ್ಯಗಳಿಂದ ಕ್ರಿಮಿನಲ್ ಹಿನ್ನೆಲೆಯ ವಲಸಿಗರು ಪ್ರವೇಶಿಸಿ, ಇಲ್ಲಿ ಅನೇಕ ಕ್ರಿಮಿನಿಲ್ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಅಂಥವರನ್ನು ಸಹ ಗುರುತಿಸಿ ಅವರ ರಾಜ್ಯಗಳಿಗೆ ಹಿಂದಕ್ಕೆ ಕಳಿಸುವ ಅಭಿಯಾನವನ್ನೂ ಸರ್ಕಾರ ಮಾಡಬೇಕು. ಕರ್ನಾಟಕ ಶಾಂತಿಪ್ರಿಯ ರಾಜ್ಯ. ಹೊರರಾಜ್ಯಗಳಿಂದ ಇಲ್ಲಿಗೆ ಬಂದು ಕ್ರಿಮಿನಲ್ ಚಟುವಟಿಕೆ ನಡೆಸುವುದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ಕರ್ನಾಟಕದ ಭದ್ರತೆ ನಮ್ಮ ಮೊದಲ ಆದ್ಯತೆಯಾಗಬೇಕು.
ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಲೀಕ್ ಆದ ನಂತರದ ಬೆಳವಣಿಗೆಗಳನ್ನು ಇಡೀ ದೇಶ ಗಮನಿಸುತ್ತಿದೆ. ಅದರಲ್ಲೂ ವಿಶೇಷವಾಗಿ ಜೂನ್ ಆರಂಭದಿಂದ ಇಲ್ಲಿಯವರೆಗೆ ದೇಶದ ವಿದ್ಯಾರ್ಥಿಗಳು ನಡೆಸುತ್ತಿರುವ ಆಂದೋಲನವನ್ನು ದೇಶದ ಜನತೆ ನೋಡುತ್ತಿದ್ದಾರೆ. ದೇಶದ ಯುವಜನರು ಕೇಳುತ್ತಿರುವುದಾದರೂ ಏನನ್ನು? 21 ಮಕ್ಕಳನ್ನು ಬಲಿತೆಗೆದುಕೊಂಡ ಈ ಹಗರಣಕ್ಕೆ ಕಾರಣಕರ್ತರು ಯಾರು? ಅವರಿಗೆ ಶಿಕ್ಷೆಯಾಗಲಿ. ಮುಂದೆಂದೂ ಇಂಥ ಹಗರಣಗಳು ನಡೆಯದಿರಲಿ. ತಮ್ಮ ಮೂಗಿನ ಅಡಿಯಲ್ಲಿ ಇಂಥ ಹತ್ಯಾಕಾಂಡಕ್ಕೆ ಸಮನಾದ ಹಗರಣ ನಡೆಯಲು ಬಿಟ್ಟು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಡಲಿ ಎಂಬುದು ಅವರ ಮುಖ್ಯ ಬೇಡಿಕೆ.
ಆದರೆ ನರೇಂದ್ರ ಮೋದಿಯವರ ನೇತೃತ್ವದ ಎನ್ ಡಿಎ ಸರ್ಕಾರಕ್ಕೆ ಏನಾಗಿದೆ ಎಂಬುದೇ ಅರ್ಥವಾಗುತ್ತಿಲ್ಲ. ಇಡೀ ದೇಶಕ್ಕೆ ಅರ್ಥವಾಗುತ್ತಿರುವುದು ಮೋದಿಯವರ ಸರ್ಕಾರಕ್ಕೆ ಅರ್ಥವಾಗುತ್ತಿಲ್ಲ. ಯಕಶ್ಚಿಃತ್ ಒಬ್ಬ ಮಂತ್ರಿಯ ರಾಜೀನಾಮೆ ಪಡೆಯಲು ಸರ್ಕಾರಕ್ಕೆ ಸಾಧ್ಯವಿಲ್ಲವೇ? ಧರ್ಮೇಂಧ್ರ ಪ್ರಧಾನ್ ಅಷ್ಟು ದೊಡ್ಡ ವ್ಯಕ್ತಿಯೇ? ಪ್ರಭಾವಶಾಲಿಯೇ? ಒಬ್ಬನ ರಾಜಕೀಯ ಭವಿಷ್ಯಕ್ಕಾಗಿ ಲಕ್ಷಾಂತರ ಮಕ್ಕಳ ಭವಿಷ್ಯವನ್ನು ನಾಶಪಡಿಸಬೇಕಾ? ಸಣ್ಣ ಮಕ್ಕಳೂ ಈಗ ಈ ಪ್ರಶ್ನೆಯನ್ನು ಕೇಳುತ್ತಿದ್ದಾರೆ.
ವಿದ್ಯಾರ್ಥಿಗಳು ಪ್ರತಿಭಟನೆ ಆರಂಭಿಸುತ್ತಿದ್ದಂತೆ ಸರ್ಕಾರ ಮಾಡಬೇಕಿದ್ದ ಮೊದಲ ಕೆಲಸ ಶಿಕ್ಷಣ ಸಚಿವರ ಬದಲಾವಣೆ. ಅದನ್ನು ಯಾರೋ ಹೇಳಿ ಕೇಳಿ ಮಾಡಬೇಕಾಗಿರಲಿಲ್ಲ. ಸರ್ಕಾರಕ್ಕೆ ವಿದ್ಯಾರ್ಥಿಗಳ ಮೇಲೆ ಕಾಳಜಿ ಇದ್ದಿದ್ದರೆ ಮೊದಲ ದಿನವೇ ಅದನ್ನು ಮಾಡಬೇಕಿತ್ತು. 21 ವಿದ್ಯಾರ್ಥಿಗಳ ಹೆಣಗಳು ಬಿದ್ದರೂ ಶಿಕ್ಷಣ ಸಚಿವನನ್ನು ಸಂಪುಟದಲ್ಲಿ ಇಟ್ಟುಕೊಳ್ಳುವುದು ಸರ್ಕಾಕ್ಕೆ ನಾಚಿಕೆಗೇಡಿನ ವಿಷಯ ಎಂದು ಸ್ವತಃ ಮೋದಿಯವರಿಗೇ ಅನ್ನಿಸಬೇಕಿತ್ತು. ಆದರೆ ಇಡೀ ಸರ್ಕಾರ ಮತ್ತು ಅದರ ಬೆಂಬಲಿಗರು ಸಚಿವನ ಬೆನ್ನಿಗೆ ನಿಂತುಬಿಟ್ಟರು.
ಈಗ ಈ ಚಳವಳಿ ಎಲ್ಲಿಗೆ ಬಂದು ನಿಂತಿದೆ ನೋಡಿ. ಆಗಾಗ ರೇಡಿಯೋಗಳಲ್ಲಿ ಮನದ ಮಾತು ಆಡುವ ಪ್ರಧಾನ ಮಂತ್ರಿಗಳು ಪರಿಸ್ಥಿತಿ ವಿಕೋಪಕ್ಕೆ ಹೋಗುವವರೆಗೆ ಮಾತೇ ಆಡಲಿಲ್ಲ. ಸಾವಿರಗಟ್ಟಲೆ ಇದ್ದ ವಿದ್ಯಾರ್ಥಿಗಳ ಸಂಖ್ಯೆ ಲಕ್ಷಾಂತರವಾಗುತ್ತ ಹೋಯಿತು. ಕೋಟಿಗಟ್ಟಲೆ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಈ ಆಂದೋಲನ ಕೂಡಿಕೊಂಡರು. ಜನರ ದೃಷ್ಟಿಯಲ್ಲಿ, ವಿದ್ಯಾರ್ಥಿಗಳ ದೃಷ್ಟಿಯಲ್ಲಿ ಸರ್ಕಾರದ ವಿಶ್ವಾಸಾರ್ಹತೆ ಮುಕ್ಕಾಗುತ್ತಲೇ ಹೋಯಿತು. ವಿದ್ಯಾರ್ಥಿಗಳು ತಮ್ಮದೇ ದೇಶದ ಸರ್ಕಾರದ ಮೇಲಿನ ನಂಬಿಕೆ ಕಳೆದುಕೊಂಡರು. ಇಷ್ಟೆಲ್ಲ ಆಗುವುದಕ್ಕೆ ಬಿಡಬೇಕಿತ್ತಾ?
ಜುಲೈ 20, 21 ರಂದು ದೆಹಲಿಯಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸರ ಪೈಶಾಚಿಕ ದಾಳಿಯನ್ನು ಯಾವ ನಾಗರಿಕ ಸಮಾಜ ಸಹಿಸಿಕೊಳ್ಳಲು ಸಾಧ್ಯ? ಈ ದಾಳಿಗೆ ಒಳಗಾದವರು ವಿದ್ಯಾರ್ಥಿಗಳು, ಹದಿಹರೆಯದವರು, 25 ವರ್ಷದ ಒಳಗಿನವರು. ಒಬ್ಬ ಇನ್ಸ್ಪೆಕ್ಟರ್ ದರ್ಜೆಯ ಅಧಿಕಾರಿ ಒಬ್ಬ ಹೆಣ್ಣಮಗಳ ಖಾಸಗಿ ಅಂಗಕ್ಕೆ ಲಾಠಿಯಿಂದ ತಿವಿಯುವ ದೃಶ್ಯವನ್ನು ಗಮನಿಸಿದೆ. ಎಂಥ ರಾಕ್ಷಸರು ಇವರು? ಮೊಳೆಗಳನ್ನು ಸಿಕ್ಕಿಸಲಾಗಿದ್ದ ಲಾಠಿಗಳಿಂದ ವಿದ್ಯಾರ್ಥಿಗಳನ್ನು ಬಡಿಯಲಾಯಿತು. ವಿದ್ಯಾರ್ಥಿಗಳ ಗುಂಪಿನ ಮೇಲೆಯೇ ಅಶ್ರುವಾಯು ಸೆಲ್ ಗಳನ್ನು ಸಿಡಿಸಲಾಯಿತು. ಪೊಲೀಸರ ಜೊತೆಯಲ್ಲಿ ಕೆಲವು ಗೂಂಡಾಗಳೂ ಸೇರಿಕೊಂಡು ವಿದ್ಯಾರ್ಥಿಗಳನ್ನು ಹೊಡೆದರು.
ನಮ್ಮ ಪ್ರಧಾನಿಯವರನ್ನು ಅವರ ಬೆಂಬಲಿಗರು ವಿಶ್ವಗುರು ಎಂದು ಹೇಳುತ್ತಾರೆ. ಅವರನ್ನು ವಿಶ್ವನಾಯಕ ಎಂದು ಬಿಂಬಿಸುತ್ತಾರೆ. ನಮ್ಮ ದೇಶದ ಪ್ರಧಾನಿ ವಿಶ್ವನಾಯಕರಾಗುವುದು ನಮಗೆ ಹೆಮ್ಮೆಯ ವಿಷಯವೇ. ಆದರೆ ತನ್ನದೇ ದೇಶದ ಲಕ್ಷಾಂತರ ವಿದ್ಯಾರ್ಥಿಗಳು ಬೀದಿಯಲ್ಲಿ ನಿಂತು ನ್ಯಾಯಕ್ಕಾಗಿ ಬೇಡುತ್ತ ಲಾಠಿ, ಬೂಟಿನೇಟು ತಿನ್ನುತ್ತಿರುವಾಗ ಪ್ರಧಾನಿ ಮೋದಿಯವರು ವಿಶ್ವನಾಯಕ ಎಂದು ಹೇಳಿಕೊಳ್ಳುವ ನೈತಿಕತೆ ಉಳಿಸಿಕೊಳ್ಳುತ್ತಾರೆಯೇ? ಇಷ್ಟು ಸಣ್ಣ ವಿಷಯ ಇವರಿಗೆ ಅರ್ಥವಾಗುತ್ತಿಲ್ಲವೇ?
ಎಂದಿನಂತೆ ಕೆಲವು ಸರ್ಕಾರದ ಬೆಂಬಲಿಗರು ವಿದ್ಯಾರ್ಥಿಗಳ ಪ್ರತಿಭಟನೆಯನ್ನು ದೇಶ ವಿರೋಧಿ, ಪಾಕಿಸ್ತಾನದಿಂದ ಫಂಡು ಬಂದಿದೆ, ಚೀನಾ ಇದರ ಹಿಂದೆ ಇದೆ ಎಂದೆಲ್ಲ ಹೇಳುತ್ತಿದ್ದಾರೆ. ಆದರೆ ಈ ದುಷ್ಟ ವ್ಯವಸ್ಥೆಯಿಂದ ಸತ್ತ 21 ಮಕ್ಕಳು ಭಾರತೀಯರಲ್ಲವೇ? ಅವರು ಪಾಕಿಸ್ತಾನಿಗಳಾ? ಚೀನೀಯರಾ? ಅವರಿಗೆ ನ್ಯಾಯ ಕೊಡಬೇಕಾಗಿದ್ದು ಭಾರತ ಸರ್ಕಾರವಲ್ಲವೇ? ನ್ಯಾಯ ಕೇಳುವವರೆಲ್ಲ ಪಾಕಿಸ್ತಾನಿಗಳಾಗಿಬಿಡುತ್ತಾರಾ ಈ ದೇಶದಲ್ಲಿ? ಯಾರೋ ಪಾಕಿಸ್ತಾನೀಯರು ಈ ಚಳವಳಿಯನ್ನು ಬೆಂಬಲಿಸಿದ ಮಾತ್ರಕ್ಕೆ ಆ ಹೋರಾಟ ಪಾಕಿಸ್ತಾನ ಪ್ರೇರಿತ ಆಗಿಬಿಡುತ್ತದೆಯೇ?
ಈಗ ನಡೆಯುತ್ತಿರುವ ವಿದ್ಯಾರ್ಥಿ ಚಳವಳಿ ಐತಿಹಾಸಿಕವಾದದ್ದು. ಈ ಚಳವಳಿಯನ್ನು ವಿದ್ಯಾರ್ಥಿಗಳೇ ಮುನ್ನಡೆಸಬೇಕು. ವಿದ್ಯಾರ್ಥಿಗಳೇ ತೀರ್ಮಾನಗಳನ್ನು ತೆಗೆದುಕೊಳ್ಳಬೇಕು. ರಾಜಕೀಯ ಪಕ್ಷಗಳು ಈ ಪ್ರತಿಭಟನೆಯಿಂದ ದೂರವೇ ಉಳಿಯಬೇಕು, ಬೇಕಿದ್ದರೆ ಅವರು ಪ್ರತ್ಯೇಕವಾಗಿ ಚಳವಳಿ ನಡೆಸಲಿ. ಈ ಚಳವಳಿಗೆ ರಾಜಕೀಯ ಬಣ್ಣ ಬರುವುದು ಬೇಡ. ವಿದ್ಯಾರ್ಥಿಗಳು ಒಂದು ದುರಹಂಕಾರಿ ಸರ್ಕಾರವನ್ನು ಬಗ್ಗಿಸಿ, ಅದರ ಕರ್ತವ್ಯವನ್ನು, ಜವಾಬ್ದಾರಿಯನ್ನು ನೆನಪಿಸುತ್ತಿದ್ದಾರೆ. ಅವರ ಜೊತೆಗೆ ನಾವು ನಿಲ್ಲೋಣ.
ವಿದ್ಯಾರ್ಥಿಗಳ ಬೆನ್ನಿಗೆ ಇಡೀ ದೇಶದ ಜನತೆ ಇದೆ. ಕನ್ನಡದ ಜನತೆಯೂ ಇದೆ. ಈ ಆಂದೋಲನ ಯಶಸ್ವಿಯಾಗಲಿ, ಶಿಕ್ಷಣ ವ್ಯವಸ್ಥೆ ಸರಿಯಾದ ದಾರಿಗೆ ಹೋಗಲಿ. ಎಲ್ಲದಕ್ಕಿಂತ ಮುಖ್ಯವಾಗಿ ನೀಟ್ ಎಂಬ ವ್ಯವಸ್ಥೆಯೇ ರದ್ದಾಗಲಿ, ನಮಗೆ ಸಿಇಟಿ ಸಾಕು, ಈ ದರಿದ್ರ ನೀಟ್ ಬೇಡವೇ ಬೇಡ.
ವಿಶ್ವ ಪರಿಸರ ದಿನದ ಹಾರ್ದಿಕ ಶುಭಾಶಯಗಳು.
ಇಂದು ಯುವ ಜನತೆ ತಮ್ಮ ಹುಟ್ಟುಹಬ್ಬದಂದು ಒಂದು ಗಿಡ ನೆಡುವ ಸಂಕಲ್ಪ ಮಾಡಿಕೊಳ್ಳದಿದ್ದರೆ ನಾಳೆ ಮಕ್ಕಳಿಗೆ ನೆರಳಿಲ್ಲ, ನೀರಿಲ್ಲ, ಉಸಿರಾಡಲು ಗಾಳಿಯಿಲ್ಲದ ಭಯಾನಕ ಭವಿಷ್ಯ ಕಾದಿದೆ. ಪ್ರಕೃತಿ ಉಳಿಸೋಣ ಕನ್ನಡ ಬೆಳೆಸೋಣ ಎನ್ನುವುದು ಈಗ ಜೀವ ಉಳಿಸುವ ಹೋರಾಟ.
#WorldEnvironmentDay
ನಾವು ಒಂದು ರೂಪಾಯಿ ತೆರಿಗೆ ಕೊಟ್ಟರೆ,
ನಮಗೆ ವಾಪಾಸ್ ಬರೋದು ಕೇವಲ 11 ಪೈಸೆ.
ನಮ್ಮ ದುಡ್ಡು ಉತ್ತರ ರಾಜ್ಯಗಳಿಗೆ ಕೋಟಿ ಗಟ್ಟಲೆ ಹರಿದು ಹೋಗುತ್ತಿವೆ. ಇದು ನ್ಯಾಯವೇಹೊಸಕಾಲಬಂದಿದೆ !ಬದಲಾವಣೆಯಪರ್ವಮುಂದಿದೆ!
#ಕರವೇಸಾಮಾಜಿಕಜಾಲತಾಣ#ಕರವೇಹೋರಾಟಗಳು#ಕರವೇ
#ಬೆಂಗಳೂರು#StopHindiImperialism
#ಕನ್ನಡನಾಡುಕನ್ನಡಿಗರಿಗೆ#voiceofkannadigas
@narayanagowdru@DrParameshwara@siddaramaiah ನಾಡು ನುಡಿಗಾಗಿ ಹೋರಾಟ ಮಾಡುವ ನಾಯಕರ ಮೇಲೆ ಆಗಿರುವ ಹೋರಾಟದ ವಿರುದ್ಧ ದಾಖಲಾಗಿರುವ ಪ್ರಕರಣಗಳು . ಅಂತ್ಯಗೊಳ್ಳಬೇಕು ಏಕೆಂದರೆ ಅವರು ತಮ್ಮ ಜೀವನಕ್ಕಾಗಿ ಮಾಡದೆ ಕನ್ನಡ ಕನ್ನಡಿಗ ಮುಂದಿನ ಪೀಳಿಗೆಯ ಕನ್ನಡಕ್ಕಾಗಿ ಹೋರಾಡಿದ್ದಾರೆ ,
ಅದರಿಂದ ಅವರ ಮೇಲೆ ಯಾವ ಪ್ರಕರಣಗಳು ಇರಬಾರದು ,ಎಂದು ನಾನು ಕೋರುತ್ತೇನೆ 🙏
ಇಂದು ಕರ್ನಾಟಕ ಸರ್ಕಾರದ ಮಾನ್ಯ ಗೃಹಸಚಿವರಾದ ಡಾ.ಜಿ.ಪರಮೇಶ್ವರ್ @DrParameshwara ಅವರನ್ನು ಭೇಟಿ ಆದೆ. ಈ ಸಂದರ್ಭದಲ್ಲಿ ಕನ್ನಡ ಪರ ಹೋರಾಟಗಾರರ ವಿರುದ್ಧ ದಾಖಲಾಗಿರುವ ಚಳವಳಿಯ ಕಾರಣಕ್ಕೆ ದಾಖಲಾಗಿರುವ ಪ್ರಕರಣಗಳನ್ನು ಹಿಂದಕ್ಕೆ ಪಡೆಯುವಂತೆ ಮನವಿ ಮಾಡಿದೆ. ಮಾನ್ಯ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರು @siddaramaiah ಈಗಾಗಲೇ ಕನ್ನಡ ಚಳವಳಿಗಾರರ ಪ್ರಕರಣಗಳನ್ನು ಹಿಂದಕ್ಕೆ ಪಡೆಯುವುದಾಗಿ ಹಲವು ಬಾರಿ ಘೋಷಿಸಿದ್ದರೂ ಅದು ಕಾರ್ಯಗತವಾಗದ ಕುರಿತು ಅವರ ಗಮನ ಸೆಳೆದೆ. ಆದಷ್ಟು ಬೇಗ ಈ ವಿಷಯವನ್ನು ಸಚಿವ ಸಂಪುಟ ಸಭೆಗೆ ತಂದು ನಾಡುನುಡಿಗಾಗಿ ಹೋರಾಡುವ ಕನ್ನಡ ಕಾರ್ಯಕರ್ತರ ಮೇಲೆ ಹೂಡಲಾಗಿರುವ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯುವ ತೀರ್ಮಾನ ಕೈಗೊಳ್ಳಬೇಕೆಂದು ಮನವಿ ಮಾಡಿದೆ.
ಕನ್ನಡ ಚಳವಳಿಗಾರರು ತಮ್ಮ ವೈಯಕ್ತಿಕ ಹಿತಸಾಧನೆಗೆ, ರಾಜಕೀಯ ಏಳಿಗೆಗೆ ಹೋರಾಡುತ್ತಿಲ್ಲ. ಅವರು ನಾಡು ನುಡಿ ನೆಲ ಜಲಕ್ಕಾಗಿ ಚಳವಳಿಯ ಭೂಮಿಕೆಯಲ್ಲಿದ್ದಾರೆ. ಕನ್ನಡ ಚಳವಳಿ ಇಲ್ಲದೇ ಹೋಗಿದ್ದರೆ ಕನ್ನಡಿಗರು ಕರ್ನಾಟಕದಲ್ಲಿ ಪರಕೀಯರಂತೆ ಬದುಕಬೇಕಾಗಿತ್ತು. ಕನ್ನಡ ಚಳವಳಿಯ ಕಾರಣಕ್ಕೆ ಅವರ ಮೇಲೆ ಹಲವಾರು ಮೊಕದ್ದಮೆಗಳನ್ನು ಹೂಡಲಾಗಿದೆ, ಈಗಲೂ ಹೂಡಲಾಗುತ್ತಿದೆ. ಕೆಲವು ಪ್ರಕರಣಗಳಲ್ಲಿ ಪೊಲೀಸರು ಸಂಬಂಧಪಡದ ಸೆಕ್ಷನ್ ಗಳನ್ನು ಸೇರಿಸಿ ಕನ್ನಡ ಚಳವಳಿಗಾರರನ್ನು ಮಾನಸಿಕವಾಗಿ ಹಿಂಸಿಸುತ್ತಿದ್ದಾರೆ. ಕನ್ನಡಕ್ಕಾಗಿ, ಕನ್ನಡಿಗರ ಬದುಕಿಗಾಗಿ ಹೋರಾಡುವ ಚಳವಳಿಗಾರರು ದಿನನಿತ್ಯ ನ್ಯಾಯಾಲಯಗಳನ್ನು ಅಲೆಯುವಂತಾಗಿದೆ. ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬಂದಾಗೆಲ್ಲ ತಮ್ಮ ಪಕ್ಷದ ಕಾರ್ಯಕರ್ತರು, ಮುಖಂಡರ ಮೇಲಿನ ಪ್ರಕರಣಗಳನ್ನು ಹಿಂದಕ್ಕೆ ಪಡೆಯುತ್ತವೆ. ಅದೂ ಕೂಡ ಕ್ರಿಮಿನಲ್ ಸ್ವರೂಪದ ಪ್ರಕರಣಗಳನ್ನು! ಆದರೆ ಕನ್ನಡ ಹೋರಾಟಗಾರರು ಮಾತ್ರ ಮಲತಾಯಿ ಮಕ್ಕಳಾಗಿದ್ದಾರೆ.
ಗೃಹ ಸಚಿವರು ಚಳವಳಿಯ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯುವ ಕುರಿತು ಅತಿಶೀಘ್ರದಲ್ಲೇ ತೀರ್ಮಾನ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಕನ್ನಡ ಪರ ಹೋರಾಟಗಾರರು, ರೈತ ಚಳವಳಿಗಾರರ ಮೇಲಿನ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯುವ ಪ್ರಸ್ತಾಪ ಸರ್ಕಾರದ ಮುಂದೆ ಇದ್ದು, ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸುವುದಾಗಿ ಭರವಸೆ ನೀಡಿದರು.
ಗೃಹ ಸಚಿವರ ಭೇಟಿಯ ಸಂದರ್ಭದಲ್ಲಿ ಮತ್ತೊಂದು ವಿಷಯವನ್ನು ಅವರ ಗಮನಕ್ಕೆ ತಂದೆ. ಸಾಮಾಜಿಕ ಜಾಲತಾಣಗಳಲ್ಲಿ ಗಣ್ಯ ವ್ಯಕ್ತಿಗಳು, ಹೋರಾಟಗಾರರ ವಿರುದ್ಧ ಬೆದರಿಕೆ ಹಾಕುವ, ಅವಹೇಳನ ಮಾಡುವ, ತೇಜೋವಧೆ ಮಾಡುವ ಕೆಟ್ಟ ಬೆಳವಣಿಗೆಗಳು ಹೆಚ್ಚುತ್ತಿವೆ. ಅತ್ಯಂತ ಕೊಳಕು ಭಾಷೆಯಲ್ಲಿ ನಿಂದಿಸುವ ಇಂಥ ಜನರು ಸ್ವಸ್ಥ ಸಮಾಜಕ್ಕೆ ಮಾರಕವಾಗಿದ್ದಾರೆ. ಮಹಿಳೆಯರನ್ನು ಅತ್ಯಂತ ಕೊಳಕಾಗಿ ನಿಂದಿಸಿ, ಅವರ ಘನತೆಯನ್ನು ಕುಗ್ಗಿಸುವ ಕೆಲಸವೂ ನಡೆಯುತ್ತಿದೆ. ವಿಶೇಷವಾಗಿ ಇತ್ತೀಚಿನ ದಿನಗಳಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಸಂಘಟನೆಯ ನಾಯಕರುಗಳ ಮೇಲೂ ಇಂಥದ್ದೇ ದಾಳಿಗಳು ನಡೆಯುತ್ತಿವೆ. ಈ ವಿಕೃತ ಮನಸ್ಥಿತಿಯವರು ಒಂದು ವ್ಯವಸ್ಥಿತ ಜಾಲವನ್ನೇ ಹೊಂದಿದ್ದು, ಇದಕ್ಕೆ ಕಾಣದ ಕೈಗಳು ಹಣಕಾಸಿನ ಸಹಾಯವೂ ಸೇರಿದಂತೆ ಎಲ್ಲ ರೀತಿಯ ಬೆಂಬಲ ನೀಡುತ್ತಿದ್ದಾರೆ. ಇದರ ಮೂಲವನ್ನು ಕಂಡುಹಿಡಿದು, ಈ ಸಮಾಜಘಾತಕರನ್ನು ಕಾನೂನಿನ ಚೌಕಟ್ಟಿನಲ್ಲಿ ಶಿಕ್ಷಿಸುವ ಅಗತ್ಯವಿದೆ ಎಂದು ಮಾನ್ಯ ಗೃಹ ಸಚಿವರಿಗೆ ಮನವರಿಕೆ ಮಾಡಿದೆ.
ನನ್ನ ಮನವಿಯನ್ನು ಗೃಹಸಚಿವರು ಆಲಿಸಿದರು ಮತ್ತು ಸಕಾರಾತ್ಮಕವಾಗಿ ಸ್ಪಂದಿಸಿದರು. ಸಾಮಾಜಿಕ ಜಾಲತಾಣಗಳಲ್ಲಿ ವಿಕೃತ ಮನಸ್ಥಿತಿಯವರ ಬೆದರಿಕೆ, ನಿಂದನೆ ಕುರಿತಂತೆ ಸರ್ಕಾರ ಕ್ರಮ ಕೈಗೊಳ್ಳುವ ಸಲುವಾಗಿ ಸೂಕ್ತ ನಿಯಮಾವಳಿಗಳನ್ನು ರೂಪಿಸುವುದಾಗಿ ಅವರು ಭರವಸೆ ನೀಡಿದರು.