ಕಾಯಿಸಿದ್ದು, ಕಾಡಿಸಿದ್ದು ಸಾಕು. ಇನ್ನೇನಿದ್ದರೂ ಅನಾವರಣ, ಲೋಕಾರ್ಪಣ.
ಇದು ಬಹಳ ದಿನಗಳ ಕನಸು. ನನಸಾಗುವ ಸಮಯ ಸಮೀಪಿಸುತ್ತಿದೆ. ಕೆಲವು ವರ್ಷಗಳಿಂದ ಪ್ರವಾಸ, ಪ್ರವಾಸೋದ್ಯಮ ಮತ್ತು ಆತಿಥ್ಯ (Travel, Tourism and Hospitality) ರಂಗಕ್ಕೆ ಮೀಸಲಾದ ಪತ್ರಿಕೆಯನ್ನು (ಮ್ಯಾಗಜಿನ್ ಅಲ್ಲ) ಕನ್ನಡಲ್ಲಿ ರೂಪಿಸಿದರೆ ಹೇಗೆ ಎಂಬ ಯೋಚನೆಯ ಪಯಣದಲ್ಲಿದ್ದೆ. ಹೊಸದೇನನ್ನೇ ಮಾಡಿದರೂ ಅದು ಕನ್ನಡದಲ್ಲಿ ಪ್ರಪ್ರಥಮವಾಗಿರಬೇಕು, ಅದು ಏಕೈಕವಾಗಿರಬೇಕು ಮತ್ತು ನೂತನ-ವಿನೂತನವಾಗಿರಬೇಕು ಎಂಬುದು ನನ್ನ ಪತ್ರಿಕೋದ್ಯಮದ ಘೋಷವಾಕ್ಯ. ಇವಿಲ್ಲದೇ ನಾನು ಏನನ್ನೂ ಮಾಡಲಾರೆ.
ಕನ್ನಡ ಪತ್ರಿಕೋದ್ಯಮದಲ್ಲಿ ಇದೊಂದು ಹೊಸ ಪ್ರಯತ್ನ, ಹೊಸ ಪ್ರಯೋಗ ಮತ್ತು ಹೊಸ ಸಾಹಸ. ಪ್ರತಿ ವಾರ ಇಪ್ಪತ್ತು ಪುಟಗಳ, ಬ್ರಾಡ್ ಶೀಟ್ ಆಕಾರದ (ವಿಶ್ವವಾಣಿ ಆಕಾರ), ಎಲ್ಲ ವರ್ಣ ಪುಟಗಳ, ಪ್ರವಾಸ-ಪ್ರವಾಸೋದ್ಯಮ-ಆತಿಥ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಸುದ್ದಿ, ಲೇಖನ, ಅಂಕಣ, ವಿಶ್ಲೇಷಣೆ, ಅನುಭವ, ಮಾಹಿತಿಯನ್ನೊಳಗೊಂಡ ಸಮೃದ್ಧ ಪತ್ರಿಕೆಯನ್ನು ಅತ್ಯಂತ ಶ್ರದ್ಧೆ ಮತ್ತು ಕಾಯಕಪ್ರೀತಿಯಿಂದ ರೂಪಿಸಿದ್ದೇವೆ.
ಉತ್ಸಾಹಿ, ಪ್ರವಾಸೋತ್ಸಾಹಿ ಮತ್ತು ಹೊಸ ಚಿಂತನೆಯ ಪತ್ರಕರ್ತ ಶ್ರೀ. ನವೀನ್ ಸಾಗರ್ ಈ ಪ್ರವಾಸದಲ್ಲಿ ನನ್ನೊಂದಿಗೆ ಸಹಪಥಿಕರಾಗಿದ್ದಾರೆ. ಕಾಲಿಗೆ ಚಕ್ರ ಕಟ್ಟಿಕೊಂಡ ತರುಣ ಪತ್ರಕರ್ತರ ತಂಡವನ್ನು ಹೊಸ ಕೈಂಕರ್ಯಕ್ಕೆ ಅಣಿಗೊಳಿಸಿದ್ದೇನೆ. ಅಂತಾರಾಷ್ಟ್ರೀಯ ಗುಣಮಟ್ಟದ ಪತ್ರಿಕೆ ಹೊಂದಿರುವ ಅತ್ಯುತ್ತಮ ವಿನ್ಯಾಸದ ಪರಿಕರಗಳನ್ನು ಬಳಸಿದ್ದೇನೆ.
ಅದಕ್ಕೆ 'ಪ್ರವಾಸಿ ಪ್ರಪಂಚ' ಎಂದು ಹೆಸರಿಟ್ಟಿದ್ದೇವೆ!
(ಪಾಟೀಲ ಪುಟ್ಟಪ್ಪನವರು 'ವಿಶ್ವವಾಣಿ' ಮತ್ತು 'ಪ್ರಪಂಚ' ಎಂಬ ಪತ್ರಿಕೆಯನ್ನು ಆರಂಭಿಸಿದ್ದು ನಿಮಗೆ ಗೊತ್ತಿರಬಹುದು. ನಾನು 'ವಿಶ್ವವಾಣಿ' ಯನ್ನು ಮಾತ್ರ ಅವರಿಂದ ಪಡೆದು, 'ಪ್ರಪಂಚ'ವನ್ನು ಕೈ ಬಿಟ್ಟರೆ ಹೇಗೆ? ಹೀಗಾಗಿ ಹೊಸ ಪತ್ರಿಕೆಯ ಹೆಸರಿನಲ್ಲಿ 'ಪ್ರಪಂಚ'ವನ್ನೂ ಇಟ್ಟುಕೊಂಡಿದ್ದೇನೆ)
ಇದು ಬರೀ ಮುದ್ರಿತ ಪತ್ರಿಕೆಯಷ್ಟೇ ಅಲ್ಲ, ವೆಬ್ ಸೈಟ್, ಡಿಜಿಟಲ್ ಮತ್ತು ಸೋಶಿಯಲ್ ಮೀಡಿಯಾ.. ಹೀಗೆ ಎಲ್ಲ ಪ್ಲಾಟ್ ಫಾರ್ಮ್ ಗಳಲ್ಲೂ ಲಭ್ಯ. ಪ್ರತಿ ಅರ್ಧ ಗಂಟೆಗೊಮ್ಮೆ ವೆಬ್ ಸೈಟ್ ನಲ್ಲಿ ಹೊಸ ಸುದ್ದಿ ಲಭ್ಯ. ಹಾಗೆ ಡಿಜಿಟಲ್ ಚಾನೆಲ್ ನಲ್ಲೂ ಪ್ರತಿ ದಿನ ಹೊಸ ಹೊಸ ವಿಡಿಯೋ ಧಾರೆ. ಸೋಶಿಯಲ್ ಮೀಡಿಯಾಗಳಲ್ಲೂ ಪ್ರವಾಸಿಗರದ್ದೇ ಫುಲ್ ಹವಾ. ಹೊರ ಊರು, ರಾಜ್ಯ, ಜಗತ್ತನ್ನು ತಿಳಿದುಕೊಳ್ಳ ಬಯಸುವವರ ಮಾಹಿತಿ ಕೋಶವಿದು.
ನಿಜ, Life is short and the world is wide. ನಿಮ್ಮನ್ನು ಬದುಕಿನ ಹೊಸ ಪಯಣಕ್ಕೆ ಅಣಿಗೊಳಿಸುವ ಪ್ರಯತ್ನವಿದು. ನೀವು 'ವಿಹಾರವೇ ವಿಶ್ವ' ಎಂದು ಭಾವಿಸಿದರೆ, ಇದು ಪ್ರವಾಸಿಗರ ಪ್ರಪಂಚ! Travel is the only thing you buy that makes you richer. ಅಷ್ಟಕ್ಕೂ 'ತಿರುಗಿ ಕೆಟ್ಟವರಿಲ್ಲ' ಅಲ್ಲವೇ?
ಇಂಥದ್ದೊಂದು ಪತ್ರಿಕೆ ಮಾಡಬಹುದಾ ಎಂದು ನೀವು ಅಚ್ಚರಿಪಡುವ ರೀತಿಯಲ್ಲಿ, ಸುಂದರ ಮನಸ್ಸಿನಿಂದ, ಚಿತ್ತಾಕರ್ಷಕ ಮತ್ತು ಮನಮೋಹಕ ಪತ್ರಿಕೆಯನ್ನು ಸಿದ್ಧಪಡಿಸಿದ್ದೇವೆ. ಅದರ ಲೋಕಾರ್ಪಣೆ ಜೂನ್ 4 ರಂದು, ಬುಧವಾರ.
ಅಂದು 'ಪ್ರವಾಸಿ ಪ್ರಪಂಚ'ವನ್ನು ನಿಮ್ಮ ಕೈಗಿಡುತ್ತೇನೆ. ಹಾಗೆ ವೆಬ್ ಸೈಟ್ ಮತ್ತು ಡಿಜಿಟಲ್ ಚಾನೆಲ್ ಗಳನ್ನೂ.
ಇದು ಹೊಸಕೆರೆಹಳ್ಳಿ ಸ್ಕೈವಾಕ್. ಸರ್ಕಲ್ ನಿಂದ ಸ್ವಲ್ಪ ಕೆಳಗೆ, ಲಿಟಲ್ ಫ್ಲವರ್ ಶಾಲೆ ಪಕ್ಕ ಇದೆ. ಮೂರೂ ಕಡೆಯಿಂದ ರಭಸದಿಂದ ಬರುವ ವಾಹನಗಳ ಮಧ್ಯೆ ಇಲ್ಲಿ ರೋಡ್ ದಾಟಲಿಕ್ಕೆ ಎದೆ ಗಟ್ಟಿಯಿರಬೇಕು. ಈ ಸ್ಕೈವಾಕ್ ಯಾಕೆ ಕ್ಲೋಸಾಗಿದೆ? ಯಾವ ಕರ್ಮಕ್ಕೆ ಇದನ್ನ ಕಟ್ಟಲಾಗಿದೆ?
#BBMP@RAshokaBJP